ADVERTISEMENT

ಇವಿಎಂ–ವಿಪ್ಯಾಟ್‌ ಮತ ತಾಳೆ: ಅರ್ಜಿ ತಳ್ಳಿಹಾಕಿದ ‘ಸುಪ್ರೀಂ‘

ಪಿಟಿಐ
Published 19 ಏಪ್ರಿಲ್ 2021, 14:08 IST
Last Updated 19 ಏಪ್ರಿಲ್ 2021, 14:08 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಮತದಾನಕ್ಕೆ ಸಂಬಂಧಿಸಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಮತ್ತು ವಿವಿ–ಪ್ಯಾಟ್‌ನ ಅಂಕಿಅಂಶ ಪೂರ್ಣ ತಾಳೆ ಆಗಬೇಕು ಎಂದು ಕೋರಿದ್ದ ಅರ್ಜಿಯನ್ನು ಸುಪ್ರಿಂ ಕೋರ್ಟ್‌ ತಳ್ಳಿಹಾಕಿದೆ.

‘ಚುನಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಮಧ್ಯಪ್ರವೇಶಿಸಲು ತಾನು ಬಯಸುವುದಿಲ್ಲ’ ಎಂದು ಮುಖ್ಯನ್ಯಾಯಮೂರ್ತಿ ಎಸ್‌.ಎ.ಬೊಬಡೆ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ, ವಿ. ರಾಮಸುಬ್ರಹ್ಮಣಿಯನ್ ಅವರಿದ್ದ ನ್ಯಾಯಪೀಠವು ಸೋಮವಾರ ಇದಕ್ಕೆ ಕಾರಣವನ್ನು ನೀಡಿತು.

ಪಶ್ಚಿಮಬಂಗಾಳ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯು ಸದ್ಯ ಪ್ರಗತಿಯಲ್ಲಿದೆ. ಈ ಎಲ್ಲ ರಾಜ್ಯಗಳಲ್ಲಿ ಮತ ಎಣಿಕೆ ಮೇ 2ರಂದು ನಡೆಯಲಿದೆ. ಅರ್ಜಿದಾರ ಗೋಪಾಲ್‌ ಸೇಠ್ ಪರವಾಗಿ ಹಾಜರಿದ್ದ ವಕೀಲರಿಗೆ ಪೀಠವು, ‘ಈ ಸಂಬಂಧ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆಯೇ’ ಎಂದು ಪ್ರಶ್ನಿಸಿತು.

ADVERTISEMENT

ಇದಕ್ಕೆ ವಕೀಲರು, ‘ಹೌದು ಆಯೋಗ ನಮ್ಮ ಕ್ರಮವನ್ನು ಶ್ಲಾಘಿಸಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯು ಜನರ ಹಕ್ಕು ಎಂದು ಹೇಳಿದೆ‘ ಎಂದು ಪ್ರತಿಕ್ರಿಯಿಸಿದರು. ಅರ್ಜಿದಾರರು ಈ ಸಂಬಂಧ ಇದಕ್ಕೂ ಮೊದಲು ಕೋಲ್ಕತ್ತ ಹೈಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದರು ಎಂದು ಅವರು ತಿಳಿಸಿದರು.

ಏಪ್ರಿಲ್‌ 2019ರಲ್ಲಿ ಸುಪ್ರೀಂ ಕೋರ್ಟ್‌, ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ್ದು, ವಿದ್ಯುನ್ಮಾನ ಮತಯಂತ್ರ ಮತ್ತು ವಿವಿಪ್ಯಾಟ್‌ಗಳ ಮತದಾಖಲು ತಾಳೆ ಆಗಿರುವುದನ್ನು ಖಾತರಿ ಪಡಿಸುವುದನ್ನು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಐದು ಮತಗಟ್ಟೆಗಳಿಗೆ ಹೆಚ್ಚಿಸಬೇಕು ಎಂದು ಸೂಚನೆ ನೀಡಿತ್ತು. ಅದಕ್ಕೂ ಹಿಂದೆ ಒಂದು ಮತಗಟ್ಟೆಯಲ್ಲಿ ಮಾತ್ರವೇ ಆಯೋಗವು ಈ ಕ್ರಮವನ್ನು ಅನುಸರಿಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.