ADVERTISEMENT

ನೀಟ್: ಅಕ್ರಮ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಪಿಟಿಐ
Published 20 ಅಕ್ಟೋಬರ್ 2021, 10:33 IST
Last Updated 20 ಅಕ್ಟೋಬರ್ 2021, 10:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸೆ.12ರಂದು ನಡೆದ ರಾಷ್ಟ್ರೀಯಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ಎನ್‌ಇಇಟಿ–ಯುಜಿ)ಯಲ್ಲಿ ಅಕ್ರಮಗಳಾಗಿವೆ ಎಂದು ಆರೋಪಿಸಿ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ಆಧರಿಸಿ ತನಿಖೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಈ ರೀತಿ ಹಸ್ತಕ್ಷೇಪ ಮಾಡುವುದರಿಂದ ತುಂಬಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ನೇತೃತ್ವದ ನ್ಯಾಯಪೀಠ, ಅರ್ಜಿದಾರರು ಎತ್ತಿರುವ ಸಮಸ್ಯೆಗಳನ್ನು ಅರಿತುಕೊಂಡಿದ್ದೇನೆ. ಆದರೆ, ಈ ವಿಷಯದಲ್ಲಿ ಮಧ್ಯಪ್ರೇಶಿಸಲು ಆಸಕ್ತಿ ತೋರುವುದಿಲ್ಲ ಎಂದು ಹೇಳಿದೆ.

ADVERTISEMENT

‘ನಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ನಮಗೆ ನೀವು ಹೇಳುತ್ತಿರುವುದು ಅರ್ಥವಾಗಿದೆ. ಆದರೆ, ಅದು ಬಹಳಷ್ಟು ಗೊಂದಲವನ್ನು ಸೃಷ್ಟಿಸುತ್ತದೆ. ಒಂದೊಮ್ಮೆ ನಾವು ಹಸ್ತಕ್ಷೇಪ ಮಾಡಿದರೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಹಾನಿಕಾರಕವಾಗುತ್ತದೆ‘ ಎಂದು ಪೀಠ ಹೇಳಿದೆ.

ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಸಲ್ಮಾನ್ ಖುರ್ಷಿದ್, ‘ ಈಗಾಗಲೇ ಪರೀಕ್ಷೆ ರದ್ದುಗೊಳಿಸಿ, ಹೊಸದಾಗಿ ಪರೀಕ್ಷೆ ನಡೆಸುವ ಮನವಿ ತಿರಸ್ಕರಿಸಿರುವುದರಿಂದ, ಪುನಃ ಆ ಮನವಿ ಸಲ್ಲಿಸುವುದಿಲ್ಲ‘ ಎಂದು ಹೇಳಿದರು. ಇದೇ ವೇಳೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಎನ್‌ಇಇಟಿ– ಪರೀಕ್ಷೆ ಅಕ್ರಮಗಳ ಕುರಿತು ದಾಖಲಾಗಿರುವ ಎಫ್‌ಐಆರ್‌ ಗಳನ್ನು ಸಲ್ಲಿಸಿದರು. ಈ ವಿಷಯದ ಕುರಿತು ಸತ್ಯಶೋಧನೆ ವರದಿಗಾಗಿ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ ಅನ್ನು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.