ಸುಪ್ರೀಂ ಕೋರ್ಟ್
ನವದೆಹಲಿ: ಕರ್ನಾಟಕದಲ್ಲಿ ನಕಲಿ ಖಾತೆಯ ಫ್ಲ್ಯಾಟ್ ಮಾರಾಟ ಮಾಡಿ ಅನಿವಾಸಿ ಭಾರತೀಯರಿಗೆ ವಂಚಿಸಿದವರ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು, ಜನ ಸಮುದಾಯದ ಮೇಲೆ ಪರಿಣಾಮ ಬೀರುವ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿಯಂತಹ ಗಂಭೀರ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವಾಗ, ಸಿಆರ್‌ಪಿಸಿಯ ಸೆಕ್ಷನ್ 482ರ ಅಡಿಯಲ್ಲಿ ಹೈಕೋರ್ಟ್ ತೆಗೆದುಕೊಂಡಿರುವ ಕ್ರಮ ಸರಿಯಲ್ಲ ಎಂದು ಹೇಳಿತು.
ಈ ಪ್ರಕರಣದಲ್ಲಿ, 15 ದೂರುಗಳ ಪೈಕಿ 13ರಲ್ಲಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಕರ್ನಾಟಕ ಸರ್ಕಾರ ಮತ್ತು ದೂರುದಾರರ ಮೇಲ್ಮನವಿಗಳನ್ನು ಪರಿಗಣಿಸಿದ ಪೀಠವು, ದೂರುದಾರರಿಗೆ ಯಾವುದೇ ವಾದ ಮಂಡಿಸಲು ಹೈಕೋರ್ಟ್ ಅವಕಾಶ ನೀಡದೆ ಮತ್ತು ಈಗಾಗಲೇ ಹೆಚ್ಚಿನ ಪ್ರಕರಣಗಳಲ್ಲಿ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿರುವ ಅಂಶ ಪರಿಗಣಿಸದಿರುವುದನ್ನು, ವಿಚಾರಣೆ ರದ್ದುಗೊಳಿಸಲು ಯಾವುದೇ ಕಾರಣಗಳನ್ನು ನೀಡದಿರುವುದನ್ನು ಗಮನಿಸಿತು. ಹಲವು ಪ್ರಕರಣಗಳಲ್ಲಿ ದೂರುದಾರರು, ಪ್ರಕರಣವನ್ನು ಇತ್ಯರ್ಥಗೊಳಿಸಿದ್ದರಿಂದ ಆದೇಶವನ್ನು ಪ್ರಶ್ನಿಸಿಲ್ಲ ಎಂಬ ಆರೋಪಿಗಳ ವಾದವನ್ನು ಪೀಠವು ತಳ್ಳಿಹಾಕಿತು.
‘ವಂಚನೆ, ನಕಲಿ ದಾಖಲೆ ಸೃಷ್ಟಿ, ಅತಿಕ್ರಮಣ ಮತ್ತು ಕ್ರಿಮಿನಲ್ ಪಿತೂರಿಯ ಗಂಭೀರ ಆರೋಪಗಳಿರುವಾಗ ಮತ್ತು ಇನ್ನಷ್ಟು ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ಬಾಕಿ ಇರುವಾಗ ಪ್ರತಿವಾದಿಗಳ ಅರ್ಜಿಗಳನ್ನು ಹೈಕೋರ್ಟ್ ರದ್ದುಪಡಿಸಲು ಸಾಧ್ಯವಿಲ್ಲ. ಅದಕ್ಕೆ ಅನುಮತಿ ಕೂಡ ನೀಡಬಾರದು’ ಎಂದು ಪೀಠವು ಹೇಳಿತು.
ವಿಚಾರಣೆ ರದ್ದುಪಡಿಸಿ ಮತ್ತು ಎಲ್ಲ ಆರೋಪಿಗಳನ್ನು ಬಿಡುಗಡೆಗೊಳಿಸಿ 2016 ಮತ್ತು 2017ರಲ್ಲಿ ಹೈಕೋರ್ಟ್ ನೀಡಿರುವ ಆದೇಶಗಳನ್ನು ಪೀಠವು ರದ್ದುಗೊಳಿಸಿತು. ಈ ಪ್ರಕರಣಕ್ಕೆ ಸಂಬಂಧಿಸಿದ ಹೊಸಕೋಟೆಯ ವಿಚಾರಣಾ ನ್ಯಾಯಾಲಯದಲ್ಲಿನ ಎಲ್ಲ ಪ್ರಕರಣಗಳನ್ನು ಮರುಸ್ಥಾಪಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.