ADVERTISEMENT

ಕೋಶಿಯಾರಿಗೆ ನೀಡಲಾಗಿದ್ದ ನ್ಯಾಯಾಂಗ ನಿಂದನೆ ನೋಟಿಸ್‌ಗೆ ‘ಸುಪ್ರೀಂ’ ತಡೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 15:47 IST
Last Updated 8 ಡಿಸೆಂಬರ್ 2020, 15:47 IST
ಭಗತ್‌ಸಿಂಗ್‌ ಕೋಶಿಯಾರಿ
ಭಗತ್‌ಸಿಂಗ್‌ ಕೋಶಿಯಾರಿ   

ನವದೆಹಲಿ: ಸರ್ಕಾರಿ ಬಂಗಲೆಗೆ ₹47 ಲಕ್ಷ ಬಾಡಿಗೆ ಉಳಿಸಿಕೊಂಡಿರುವ ಆರೋಪದಡಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ, ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರಿಗೆಉತ್ತರಾಖಂಡ ಹೈಕೋರ್ಟ್‌ ನೀಡಿದ್ದ ನ್ಯಾಯಾಂಗ ನಿಂದನೆ ನೋಟಿಸ್‌ಗೆ ಸುಪ್ರೀಂ ಕೋರ್ಟ್‌ ಮಂಗಳವಾರ ತಡೆ ನೀಡಿದೆ.

ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ವಾಸಕ್ಕಾಗಿ ಆ ಬಂಗಲೆಯನ್ನು ನೀಡಲಾಗಿತ್ತು. ನ್ಯಾಯಮೂರ್ತಿ ಆರ್‌.ಎಫ್‌.ನಾರಿಮನ್‌ ಅವರಿದ್ದ ಪೀಠವು ಈ ನೋಟಿಸ್‌ಗೆ ತಡೆ ನೀಡಿತು. ಹೈಕೋರ್ಟ್‌ ಆದೇಶಕ್ಕೆ ತಡೆ ನೀಡುವಂತೆ ವಕೀಲರಾದ ಅರ್ಧೇಂದು ಮೌಲಿ ಪ್ರಸಾದ್‌ ಹಾಗೂ ಪ್ರವೇಶ್‌ ಠಾಕೂರ್‌ ಅವರ ಮೂಲಕ ಕೋಶಿಯಾರಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ‘ಸಂವಿಧಾನದ 361ನೇ ವಿಧಿ ಅನ್ವಯ, ರಾಷ್ಟ್ರಪತಿ ಮತ್ತು ರಾಜ್ಯಪಾಲರ ವಿರುದ್ಧ ಇಂಥ ವಿಚಾರಣೆಗೆ ರಕ್ಷಣೆ ಇದೆ. ಆ ಬಂಗಲೆಗೆ ನಿಗದಿಪಡಿಸಿದ್ದ ಮಾರುಕಟ್ಟೆ ಬಾಡಿಗೆ ದರವು ವಿಪರೀತವಾಗಿತ್ತು’ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಪ್ರಕರಣದಲ್ಲಿ ನನ್ನ ಅಭಿಪ್ರಾಯವನ್ನು ಪಡೆಯದೇ ಹೈಕೋರ್ಟ್‌ ಆದೇಶ ಹೊರಡಿಸಿದೆ ಎಂದು ಕೋಶಿಯಾರಿ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮತ್ತೊಂದು ಅರ್ಜಿಯ ಜೊತೆ ವಿಚಾರಣೆಗೆ ಪೀಠವು ತೀರ್ಮಾನಿಸಿ, ಮುಂದೂಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.