ADVERTISEMENT

ಕಂಪನಿಗಳ ವಿಲೀನ: ಅಜೀಂ ಪ್ರೇಮ್‌ಜಿ ಕುಟುಂಬದ ವಿರುದ್ಧದ ಪ್ರಕರಣಕ್ಕೆ ತಡೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 20:47 IST
Last Updated 18 ಡಿಸೆಂಬರ್ 2020, 20:47 IST
ಅಜೀಂ ಪ್ರೇಮ್‌ಜಿ
ಅಜೀಂ ಪ್ರೇಮ್‌ಜಿ   

ನವದೆಹಲಿ: ಕಂಪನಿಗಳ ವಿಲೀನಕ್ಕೆ ಸಂಬಂಧಿಸಿದಂತೆ ಖ್ಯಾತ ಉದ್ಯಮಿ ಅಜೀಂ ಪ್ರೇಮ್‌ಜಿ ಅವರ ಕುಟುಂಬದ ವಿರುದ್ಧ 2017ರಲ್ಲಿ ಬೆಂಗಳೂರಿನ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಖಾಸಗಿ ದೂರಿನ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.

ಅಜೀಂ ಪ್ರೇಮ್‌ಜಿ ಅವರ ಒಡೆತನದ ಮೂರು ಕಂಪನಿಗಳಲ್ಲಿರುವ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಸದಾಗಿ ರಚಿಸಲಾಗಿರುವ ಖಾಸಗಿ ಟ್ರಸ್ಟ್‌ ಮತ್ತು ಕಂಪನಿಗೆ ವರ್ಗಾಯಿಸಿರುವುದು ಕಾನೂನು ಬಾಹಿರ ಎಂದು ಪ್ರೇಮ್‌ಜಿ, ಅವರ ಪತ್ನಿ ಹಾಗೂ ಇತರ ಇಬ್ಬರ ವಿರುದ್ಧ ಚೆನ್ನೈ ಮೂಲದ ‘ಇಂಡಿಯಾ ಅವೇಕ್ ಫಾರ್ ಟ್ರಾನ್ಸ್‌ಪೆರೆನ್ಸಿ’ ಎನ್ನುವ ಸರ್ಕಾರೇತರ ಸಂಸ್ಥೆ ದೂರು ದಾಖಲಿಸಿತ್ತು.

ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ನ್ಯಾಯಪೀಠವು ದೂರುದಾರರಾದ ‘ಇಂಡಿಯಾ ಅವೇಕ್ ಫಾರ್ ಟ್ರಾನ್ಸ್‌ಪೆರೆನ್ಸಿ’ಗೆ ಈ ಸಂಬಂಧ ನೋಟಿಸ್ ಜಾರಿಗೆ ಆದೇಶಿಸಿದೆ.

ADVERTISEMENT

ಪ್ರೇಮ್‌ಜಿ ಪರ ಹಿರಿಯ ವಕೀಲರಾದ ಎ.ಎಂ. ಸಿಂಘ್ವಿ ಅವರು ‘ಇದೊಂದು ವಿಲಕ್ಷಣ ಪ್ರಕರಣವಾಗಿದೆ. ದೂರುದಾರರು ಆರೋಪಿಸಿರುವ ಮೂರೂ ಕಂಪನಿಗಳು ಅಜೀಂ ಪ್ರೇಮ್‌ಜಿ ಸಮೂಹಕ್ಕೆ ಸೇರಿವೆ. ಈ ಎಲ್ಲವೂ ಪ್ರೇಮ್‌ಜಿ ಮತ್ತು ಅವರ ತಾಯಿಯ ಒಡೆತನದಲ್ಲಿವೆ. ಈ ಮೂರೂ ಕಂಪನಿಗಳು ಪ್ರೇಮ್‌ಜಿ ಸಮೂಹದ ನಾಲ್ಕನೇ ಕಂಪನಿಯಲ್ಲಿ ವಿಲೀನಗೊಂಡಿವೆ’ ಎಂದು ಹೇಳಿದ್ದಾರೆ.

ಪ್ರೇಮ್‌ಜಿ ಪರ ಮತ್ತೊಬ್ಬ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಅವರು, ‘ಈ ಕಂಪನಿಗಳಿಗೆ ಎನ್‌ಜಿಒ ಷೇರುದಾರರಲ್ಲ ಮತ್ತು ಈ ಸಂಸ್ಥೆ ಈಗಾಗಲೇ ಪ್ರೇಮ್‌ಜಿ ಸಮೂಹದ ವಿರುದ್ಧ ಅನೇಕ ದಾವೆಗಳನ್ನು ದಾಖಲಿಸಿದೆ’ ಎಂದರು.

ಎನ್‌ಜಿಒ ನೀಡಿದ ದೂರಿನ ಮೇರೆಗೆ ವಿಚಾರಣಾ ನ್ಯಾಯಾಲಯವು ಕ್ರಮ ಕೈಗೊಂಡಿತ್ತು. ವಿಚಾರಣಾ ನ್ಯಾಯಾಲಯವು ಜ. 27ರಂದು ನೀಡಿರುವ ಸಮನ್ಸ್ ರದ್ದುಪಡಿಸುವಂತೆ ಕೋರಿ ಪ್ರೇಮ್‌ಜಿ, ಅವರ ಪತ್ನಿ ಮತ್ತು ಇತರ ಇಬ್ಬರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪ್ರೇಮ್‌ಜಿ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಕಂಪನಿಗಳ ವಿಲೀನದ ಪ್ರಸ್ತಾವವನ್ನು ಹೈಕೋರ್ಟ್ 2015ರ ಮಾರ್ಚ್ 26ರಂದು ಅನುಮೋದಿಸಿತ್ತು. ಈ ವಿಷಯವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಸಮನ್ಸ್ ಹೊರಡಿಸಲಾಗಿದೆ ಎಂದು ಪ್ರೇಮ್ ಜಿ ಕುಟುಂಬ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ವಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.