ADVERTISEMENT

ನೌಕಾಪಡೆಯ ಹತ್ತು ಮಹಿಳಾ ಅಧಿಕಾರಿಗಳ ನಿವೃತ್ತಿ: ‘ಸುಪ್ರೀಂ’ ತಡೆ

ಪೂರ್ಣಾವಧಿ ನೇಮಕ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ: ಪ್ರತಿಕ್ರಿಯೆ ನೀಡಲು ಕೇಂದ್ರ, ನೌಕಾಪಡೆಗೆ ಸೂಚನೆ

ಪಿಟಿಐ
Published 30 ಡಿಸೆಂಬರ್ 2020, 10:30 IST
Last Updated 30 ಡಿಸೆಂಬರ್ 2020, 10:30 IST
.ಸುಪ್ರೀಂ ಕೋರ್ಟ್
.ಸುಪ್ರೀಂ ಕೋರ್ಟ್   

ನವದೆಹಲಿ:ಪೂರ್ಣಾವಧಿ ನೇಮಕ (ಪರ್ಮನೆಂಟ್‌ ಕಮಿಷನ್‌) ಕೋರಿದ್ದ ನೌಕಾಪಡೆಯ ಹತ್ತು ಮಹಿಳಾ ಅಧಿಕಾರಿಗಳ ನಿವೃತ್ತಿ ಅಥವಾ ಕರ್ತವ್ಯದಿಂದ ಬಿಡುಗಡೆಗೆ ಸಂಬಂಧಿಸಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ. ಅಧಿಕಾರಿಗಳು ಸಲ್ಲಿಸಿದ ಅರ್ಜಿಗೆ ಕೇಂದ್ರ ಸರ್ಕಾರ ಮತ್ತು ನೌಕಾಪಡೆ ಮುಖ್ಯಸ್ಥರು ಉತ್ತರ ಸಲ್ಲಿಸಬಹುದು ಎಂದು ಪೀಠವು ತಿಳಿಸಿದೆ.

ವಿಡಿಯೊ ಕಾನ್ಫೆರೆನ್ಸ್‌ ಮೂಲಕ ವಿಚಾರಣೆ ನಡೆಸಿದ ಪೀಠವು, ಮಹಿಳಾ ಅಧಿಕಾರಿಗಳ ನಿವೃತ್ತಿ ಅಥವಾ ಕರ್ತವ್ಯದಿಂದ ಬಿಡುಗಡೆಗೆ ಸಂಬಂಧಿಸಿದಂತೆ ಡಿಸೆಂಬರ್‌ 18ರಂದು ನೀಡಿದ್ದ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ತಿಳಿಸಿದೆ. ಮುಂದಿನ ವಿಚಾರಣೆಯನ್ನು ಜನವರಿ 19ಕ್ಕೆ ನಿಗದಿಪಡಿಸಿದೆ.

ADVERTISEMENT

ನೌಕಾಪಡೆಯ ಮಹಿಳಾ ಅಧಿಕಾರಿಗಳ ಪರ ವಕೀಲರಾದ ಮೀನಾಕ್ಷಿ ಅರೋರಾ ವಾದ ಮಂಡಿಸಿದ್ದರು. ಕೇಂದ್ರ ಸರ್ಕಾರದ ಪರ ಹಿರಿಯ ವಕೀಲ ಆರ್‌. ಬಾಲಸುಬ್ರಮಣಿಯನ್‌ ವಾದ ಮಂಡಿಸಿದ್ದರು.

ಮಹಿಳಾ ಅಧಿಕಾರಿಗಳಾದ ಅಣ್ಣಿ ನಾಗರಾಜ್‌ ಮತ್ತು ವಿಜಯೇತಾ ಅವರು ಪರ್ಮನೆಂಟ್‌ ಕಮಿಷನ್‌ ಕೋರಿ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಇಬ್ಬರು ಡಿಸೆಂಬರ್‌ 31ರಂದು ನೌಕಾಪಡೆಯ ಸೇವೆಯಿಂದ ಬಿಡುಗಡೆ ಹೊಂದುವವರಿದ್ದರು.

ಭಾರತೀಯ ನೌಕಾಪಡೆಯಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಪರ್ಮನೆಂಟ್‌ ಕಮಿಷನ್‌ ರಚಿಸುವಂತೆ ಕೇಂದ್ರ ಸರ್ಕಾರ ಮತ್ತು ನೌಕಾಪಡೆಗೆ ಸುಪ್ರೀಂ ಕೋರ್ಟ್‌ ಮಾರ್ಚ್‌ 17ರಂದು ಆದೇಶ ನೀಡಿತ್ತು. ಇದಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ಮೂರು ತಿಂಗಳ ಒಳಗೆ ಕೈಗೊಳ್ಳುವಂತೆ ನ್ಯಾಯಾಲಯ ಸೂಚಿಸಿತ್ತು. ಬಳಿಕ, ಡಿಸೆಂಬರ್‌ 31ರವರೆಗೆ ಈ ಗಡುವು ವಿಸ್ತರಿಸಲಾಗಿತ್ತು.

ಸೇನೆಯಲ್ಲಿ ಅಲ್ಪಾವಧಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಅಧಿಕಾರಿಗಳಿಗೆ ಕಾಯಂ ಸೇವೆಯ ಅವಕಾಶ (ಪರ್ಮನೆಂಟ್‌ ಕಮಿಷನ್‌) ನೀಡಬೇಕೆಂದು ತಾನು ಹಿಂದೆ ನೀಡಿದ್ದ ತೀರ್ಪನ್ನು ಜಾರಿಗೊಳಿಸಲು ಸರ್ಕಾರಕ್ಕೆ ಸುಪ್ರಿಂ ಕೋರ್ಟ್‌ ಇನ್ನೂ ಒಂದು ತಿಂಗಳ ಕಾಲಾವಕಾಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.