ADVERTISEMENT

ಪ್ರಶಾಂತ್‌ ಭೂಷಣ್ ಪ್ರಕರಣ: ಕೆಲ ಅಂಶಗಳ ವಿಸ್ತೃತ ವಿಚಾರಣೆಗೆ ‘ಸುಪ್ರೀಂ’ ಸಮ್ಮತಿ

ಪಿಟಿಐ
Published 17 ಆಗಸ್ಟ್ 2020, 16:04 IST
Last Updated 17 ಆಗಸ್ಟ್ 2020, 16:04 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ವಕೀಲ ಪ್ರಶಾಂತ್‌ ಭೂಷಣ್‌ ಹಾಗೂ ಪತ್ರಕರ್ತ ತರುಣ್‌ ತೇಜ್‌ಪಾಲ್‌ ಅವರ ವಿರುದ್ಧ 2009ರಲ್ಲಿ ದಾಖಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿರುವ ಕೆಲವು ಅಂಶಗಳನ್ನು ವಿಸ್ತೃತ ವಿಚಾರಣೆಗೆ ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್‌ ಸೋಮವಾರ ತಿಳಿಸಿದೆ.

ನ್ಯಾಯಮೂರ್ತಿಗಳ ವಿರುದ್ಧವೇ ಆರೋಪ ಕೇಳಿಬಂದಾಗ, ಅಂತಹ ಪ್ರಕರಣದ ನ್ಯಾಯಾಂಗ ನಿಂದನೆ ವಿಚಾರಣೆ ಪ್ರಕ್ರಿಯೆ ಹೇಗಿರಬೇಕು ಎಂಬ ಬಗ್ಗೆವಕೀಲರ ವಾದಮಂಡನೆ ಕೇಳಲು ಸಿದ್ಧ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.‘ಇಂಥ ಹೇಳಿಕೆಗಳನ್ನು ನೀಡಬಹುದೇ ಮತ್ತು ಇವುಗಳನ್ನು ನಿಭಾಯಿಸಲು ಯಾವ ವಿಧಾನವನ್ನು ಅನುಸರಿಬೇಕು ಎನ್ನುವುದರ ಕುರಿತು ಅಭಿಪ್ರಾಯ ಕೇಳಲು ಸಿದ್ಧವಿದೆ’ ಎಂದು ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿತು.

ಇಂಥ ಆರೋಪಗಳನ್ನು ಮಾಡಿದಾಗ ಅನುಸರಿಸಬೇಕಾದ ವಿಚಾರಣಾ ಪ್ರಕ್ರಿಯೆ ಕುರಿತು ಅಭಿಪ್ರಾಯ ಸಲ್ಲಿಸಲು ಭೂಷಣ್‌ ಪರವಾಗಿ ವಾದಿಸಿದ್ದ ರಾಜೀವ್‌ ಧವನ್‌, ಶಾಂತಿ ಭೂಷಣ್‌ ಹಾಗೂ ತೇಜ್‌ಪಾಲ್‌ ಪರ ವಾದಿಸಿದ್ದ ಕಪಿಲ್‌ ಸಿಬಲ್‌ ಅವರಿಗೆ ಪೀಠ ಸೂಚಿಸಿತು. ವಿಚಾರಣೆಯನ್ನು ಆಗಸ್ಟ್‌ 24ಕ್ಕೆ ಮುಂದೂಡಲಾಗಿದೆ.

ADVERTISEMENT

ತೇಜ್‌ಪಾಲ್‌ ಅವರು ಸಂಪಾದಕರಾಗಿದ್ದ ನಿಯತಕಾಲಿಕಕ್ಕೆ ನೀಡಿದ್ದ ಸಂದರ್ಶನದಲ್ಲಿ ಭೂಷಣ್‌, ಸುಪ್ರೀಂ ಕೋರ್ಟ್‌ನ ಮಾಜಿ ಹಾಗೂ ಹಾಲಿ ನ್ಯಾಯಮೂರ್ತಿಗಳ ವಿರುದ್ಧ ದೋಷಾರೋಪಣೆ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ 2009 ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಭೂಷಣ್‌ ಹಾಗೂ ತೇಜ್‌ಪಾಲ್‌ ಅವರಿಗೆ ನಿಂದನೆ ನೋಟಿಸ್‌ ನೀಡಿತ್ತು.

ಕಳೆದ ಭಾನುವಾರ ಪ್ರಕರಣದ ವಿಚಾರಣೆ ವೇಳೆ ‘ನ್ಯಾಯಮೂರ್ತಿಗಳ ವಿರುದ್ಧ ಭ್ರಷ್ಟಾಚಾರ ಆರೋಪವು ನ್ಯಾಯಾಂಗ ನಿಂದನೆ ಆಗುವುದಿಲ್ಲ’ ಎಂದು ಹೇಳಿದ್ದರು. ‘ಕೆಲವು ಅಂಶಗಳನ್ನು ವಿಸ್ತೃತ ಪೀಠ ಅಥವಾ ಸಾಂವಿಧಾನಿಕ ಪೀಠವು ವಿಚಾರಣೆ ನಡೆಸಬೇಕು’ ಎಂದು ರಾಜೀವ್‌ ಧವನ್‌ ವಿಚಾರಣೆ ವೇಳೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.