ADVERTISEMENT

ಉಚಿತ ಕೊಡುಗೆಗಳನ್ನು ಪ್ರಶ್ನಿಸಿದ ಹೊಸ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ

‘ಭ್ರಷ್ಟ ಮಾರ್ಗ’ ಎಂದು ಘೋಷಿಸುವಂತೆ ಕೋರಿರುವ ಹೊಸ ಅರ್ಜಿಯೊಂದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಮಾನಿಸಿದೆ.

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 14:40 IST
Last Updated 13 ಸೆಪ್ಟೆಂಬರ್ 2024, 14:40 IST
<div class="paragraphs"><p>supreme-court</p></div>

supreme-court

   

ನವದೆಹಲಿ: ಉಚಿತ ಕೊಡುಗೆಗಳನ್ನು ನೀಡುವುದಾಗಿ ರಾಜಕೀಯ ಪಕ್ಷಗಳು ಚುನಾವಣೆಗೂ ಮೊದಲು ಭರವಸೆ ನೀಡುವುದನ್ನು ‘ಭ್ರಷ್ಟ ಮಾರ್ಗ’ ಎಂದು ಘೋಷಿಸುವಂತೆ ಕೋರಿರುವ ಹೊಸ ಅರ್ಜಿಯೊಂದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಮಾನಿಸಿದೆ.

ಬೆಂಗಳೂರಿನ ಲಕ್ಷ್ಮೀದೇವಿ ಎನ್ನುವವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವೊಂದು ಸೂಚಿಸಿದೆ.

ADVERTISEMENT

ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿರುವ ಇದೇ ಸ್ವರೂಪದ ಇನ್ನೊಂದು ಅರ್ಜಿಯ ಜೊತೆಯಲ್ಲೇ ಈ ಅರ್ಜಿಯನ್ನೂ ಇರಿಸುವಂತೆ ಕೋರ್ಟ್‌ ಸೂಚನೆ ನೀಡಿದೆ.

ಚುನಾವಣಾ ಪ್ರಕ್ರಿಯೆಯು ಋಜು ಮಾರ್ಗದಲ್ಲಿ ನಡೆಯುವುದನ್ನು ಖಾತರಿಪಡಿಸಲು, ಸಾರ್ವಜನಿಕ ನಿಧಿಯನ್ನು ಜವಾಬ್ದಾರಿಯಿಂದ ಬಳಕೆ ಮಾಡುವಂತಾಗಲು ಚುನಾವಣಾ ಪ್ರಣಾಳಿಕೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ನಿಯಮಗಳು ಇರಬೇಕು. ಅವಾಸ್ತವಿಕವಾದ ಹಾಗೂ ಹಣಕಾಸಿನ ದೃಷ್ಟಿಯಿಂದ ಹೊರೆಯಂತೆ ಆಗುವ ಭರವಸೆಗಳನ್ನು ನೀಡುವುದನ್ನು ನಿಷೇಧಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

‘ಇಂತಹ ನಿಯಮಗಳು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಯ ತತ್ವವನ್ನು ರಕ್ಷಿಸುವಂತೆ ಇರಬೇಕು. ರಾಜ್ಯಗಳ ಹಣಕಾಸಿನ ಆರೋಗ್ಯವನ್ನು ಕಾಯುವಂತೆ ಮತ್ತು ಮತದಾರರ ಹಿತವನ್ನು ಕಾಯುವಂತೆ ಇರಬೇಕು’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ತಾವು ಅಧಿಕಾರಕ್ಕೆ ಬಂದರೆ ಸರ್ಕಾರದ ಬೊಕ್ಕಸದಿಂದ ಉಚಿತ ಕೊಡುಗೆ ನೀಡಲಾಗುವುದು ಎಂಬ ಭರವಸೆ ಕೊಡುವುದನ್ನು, ಅದರಲ್ಲೂ ಮುಖ್ಯವಾಗಿ ಹಣದ ರೂಪದಲ್ಲಿ ಉಚಿತ ಕೊಡುಗೆ ನೀಡಲಾಗುವುದು ಎಂದು ಹೇಳುವುದನ್ನು, ಪ್ರಜಾ ಪ್ರಾತಿನಿಧ್ಯ ಕಾಯ್ದೆ – 1951ರ ಅಡಿಯಲ್ಲಿ ಭ್ರಷ್ಟ ಮಾರ್ಗ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಕರ್ನಾಟಕದ ಉದಾಹರಣೆಯನ್ನು ನೀಡಿರುವ ಅರ್ಜಿಯು, ಉಚಿತ ಕೊಡುಗೆಗಳನ್ನು ನೀಡುವುದಾಗಿ ಯಾವ ನಿಯಂತ್ರಣವೂ ಇಲ್ಲದೆ ಭರವಸೆ ಕೊಟ್ಟ ಕಾರಣದಿಂದಾಗಿ, ಸರ್ಕಾರದ ಬೊಕ್ಕಸದ ಮೇಲೆ ಗಣನೀಯವಾದ ಹಾಗೂ ಉತ್ತರದಾಯಿತ್ವ ಇಲ್ಲದ ಹೊರೆ ಬಿದ್ದಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.