
ನವದೆಹಲಿ: ಎರಡನೇ ಮಗುವಿನ ಆಕಾಂಕ್ಷೆ ಇದ್ದರೂ ಪತ್ನಿಗೆ ಮತ್ತೊಮ್ಮೆ ಗರ್ಭಧರಿಸುವ ಸಾಧ್ಯತೆ ಇಲ್ಲದಿದ್ದಾಗ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲದಿರುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಜೈವಿಕವಾಗಿ ಎರಡನೇ ಮಗು ಪಡೆದುಕೊಳ್ಳಲು ಸಾಧ್ಯವಿಲ್ಲದ ದಂಪತಿಯೊಬ್ಬರು ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹದೇವನ್ ಅವರ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು.
‘ದೇಶದಲ್ಲಿ ಜನಸಂಖ್ಯೆ ಅಧಿಕವಾಗುತ್ತಿದೆ. ಈ ದೃಷ್ಟಿಯಿಂದ ಬಾಡಿಗೆ ತಾಯ್ತನದ ಮೂಲಕ ಎರಡನೇ ಮಗು ಪಡೆದುಕೊಳ್ಳಲು ನಿರ್ಬಂಧ ಇರುವುದು ಸರಿಯಾಗಿಯೇ ಇದೆಯಲ್ಲವೇ’ ಎಂದು ನ್ಯಾ. ನಾಗರತ್ನ ಅವರು ಅಭಿಪ್ರಾಯಪಟ್ಟರು.
ದಂಪತಿ ಪರ ಹಾಜರಿದ್ದ ವಕೀಲೆ ಪ್ರತಿಕ್ರಿಯಿಸಿ, ‘ಸರ್ಕಾರವು ವ್ಯಕ್ತಿಯ ವೈಯಕ್ತಿಕ ಬದುಕಿನಲ್ಲಿ ಮತ್ತು ಸಂತಾನೋತ್ಪತ್ತಿಗೆ ಸಂಬಂಧಿಸಿದ ಆಯ್ಕೆಯಲ್ಲಿಯೂ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ’ ಎಂದರು.
‘ಸಂತಾನೋತ್ಪತ್ತಿ ತಂತ್ರಜ್ಞಾನ ಕಾಯ್ದೆ ಮತ್ತು ಬಾಡಿಗೆ ತಾಯ್ತನ ಕಾಯ್ದೆಯಲ್ಲಿ ‘ಬಂಜೆತನ’ ಅಂದರೆ ಏನು ಎಂಬುದನ್ನು ವಿವರಿಸಲಾಗಿದೆ. ಬಾಡಿಗೆ ತಾಯ್ತನದ ಮೂಲಕ ಮೊದಲನೇ ಮಗುವನ್ನು ಮಾತ್ರವೇ ಪಡೆದುಕೊಳ್ಳಬೇಕು ಎಂಬುದಾಗಿ ಈ ಕಾಯ್ದೆಗಳಲ್ಲಿ ವಿವರಿಸಲಾಗಿಲ್ಲ’ ಎಂದು ವಕೀಲೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.