ADVERTISEMENT

ಸಿಬಿಎಸ್‌ಇ ಮೂಲ ಫಲಿತಾಂಶ ಉಳಿಸಲು ಮನವಿ; ಡಿ.6ರಂದು ಅರ್ಜಿ ವಿಚಾರಣೆ – 'ಸುಪ್ರೀಂ'

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2021, 11:21 IST
Last Updated 22 ನವೆಂಬರ್ 2021, 11:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳಲು ಮತ್ತೆ ಪರೀಕ್ಷೆಗೆ ಹಾಜರಾಗಿದ್ದ ಸಿಬಿಎಸ್‌ಇ 12ನೇ ತರಗತಿಯ ಕೆಲ ವಿದ್ಯಾರ್ಥಿಗಳು, ‘ಮೂಲ ಫಲಿತಾಂಶವನ್ನೇ ಉಳಿಸಿಕೊಳ್ಳಲು ಅವಕಾಶ ನೀಡುವಂತೆ ಮಂಡಳಿಗೆ ನಿರ್ದೇಶನ ನೀಡಬೇಕು’ ಎಂದು ಕೋರಿ ಸಲ್ಲಿಸಿರುವ ಅರ್ಜಿಯನ್ನು ಡಿಸೆಂಬರ್ 6ರಂದು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

11 ವಿದ್ಯಾರ್ಥಿಗಳು ಈ ಸಂಬಂಧ ಅರ್ಜಿ ಸಲ್ಲಿಸಿದ್ದರು. 30:30:40 ಸೂತ್ರದಡಿ ಈ ಮುನ್ನ ಮಂಡಳಿ ಘೋಷಿಸಿದ್ದ ಫಲಿತಾಂಶದಲ್ಲಿ ಇವರು ಉತ್ತೀರ್ಣರಾಗಿದ್ದರು. ಫಲಿತಾಂಶ ಸುಧಾರಣೆಗಾಗಿ ಆಗಸ್ಟ್‌–ಸೆಪ್ಟೆಂಬರ್‌ ತಿಂಗಳಲ್ಲಿ ಮತ್ತೊಮ್ಮೆ ಪರೀಕ್ಷೆಗೆ ಹಾಜರಾಗಿದ್ದರು.

ಪರೀಕ್ಷೆಯ ಬಳಿಕ ಈ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಎಂದು ಘೋಷಿಸಿಲ್ಲ ಅಥವಾ ಕಡಿಮೆ ಅಂಕಗಳನ್ನು ನೀಡಲಾಗಿಲ್ಲ. ಆದರೆ, ಈ ಮೊದಲು ಘೋಷಿಸಿದ್ದ ಫಲಿತಾಂಶ ರದ್ದುಪಡಿಸಲಾಗುತ್ತದೆ ಎಂಬ ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

ADVERTISEMENT

ನ್ಯಾಯಮೂರ್ತಿಗಳಾದ ಎ.ಎಂ.ಖಾನ್‌ವಿಲ್ಕರ್ ಮತ್ತು ಸಿ.ಟಿ.ರವಿಕುಮಾರ್ ಅವರಿದ್ದ ನ್ಯಾಯಪೀಠದ ಎದುರು ಅರ್ಜಿ ಬಂದಾಗ, ಸಿಬಿಎಸ್‌ಇ ಪ್ರತಿನಿಧಿಸಿದ್ದ ವಕೀಲರು, ‘ನನಗೆ ಭಾನುವಾರವಷ್ಟೇ ಈ ಅರ್ಜಿಯ ಪ್ರತಿ ತಲುಪಿದೆ. ಸ್ವಲ್ಪ ಸಮಯ ಬೇಕು’ ಎಂದರು. ತದನಂತರ ಪೀಠವು ಅರ್ಜಿಯನ್ನು ಡಿಸೆಂಬರ್ 6ರಂದು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಪ್ರಕಟಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.