ADVERTISEMENT

ಮಾಜಿ ಯೋಧ ತೇಜ್‌ಬಹದ್ದೂರ್ ಅರ್ಜಿ ವಜಾಗೊಳಿಸಿದ ‘ಸುಪ್ರೀಂ’

ಲೋಕಸಭಾ ಚುನಾವಣೆ: ಪ್ರಧಾನಿ ವಿರುದ್ಧ ಕಣಕ್ಕಿಳಿಯುವ ವೇಳೆ ನಾಮಪತ್ರ ತಿರಸ್ಕೃತಗೊಂಡ ಪ್ರಕರಣ

ಪಿಟಿಐ
Published 24 ನವೆಂಬರ್ 2020, 10:06 IST
Last Updated 24 ನವೆಂಬರ್ 2020, 10:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿ ಲೋಕಸಭಾ ಕ್ಷೇತ್ರದಿಂದಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ಸಲ್ಲಿಸಿದ್ದ ನಾಮಪತ್ರವನ್ನು ತಿರಸ್ಕರಿಸಿದ ಚುನಾವಣಾ ಸಮಿತಿಯ ಕ್ರಮವನ್ನು ಪ್ರಶ್ನಿಸಿ ಮಾಜಿ ಯೋಧ ತೇಜ್‌ಬಹದ್ದೂರ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಜಾ ಮಾಡಿತು.

ಮುಖ್ಯ ನಾಯಮೂರ್ತಿ ಎಸ್‌.ಎ.ಬೊಬಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್‌.ಬೊಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠ ಪ್ರಕರಣದ ವಿಚಾರಣೆಯನ್ನು ನ.18ರಂದು ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ್ದು, ಈ ಹಿಂದೆ ತೇಜ್ ಬಹಾದ್ದೂರ್ ಅರ್ಜಿ ವಜಾಗೊಳಿಸಿದ್ದ ಅಲಹಾಬಾದ್ ಹೈಕೋರ್ಟ್‌ನ ಕ್ರಮವನ್ನು ಎತ್ತಿಹಿಡಿಯಿತು.

ಬಿಎಸ್ಎಫ್‌ನಿಂದ 2017ರಲ್ಲಿ ವಜಾಗೊಂಡಿದ್ದ ತೇಜ್‌ ಬಹದ್ದೂರ್ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕಳೆದ ವರ್ಷದ ಮೇ 1ರಂದು ನಾಮಪತ್ರ ಸಲ್ಲಿಸಿದ್ದರು. ಬಹಾದ್ದೂರ್ ಪರ ವಕೀಲರು, ತಮ್ಮ ಕಕ್ಷಿದಾರರರು ಮೊದಲು ಪಕ್ಷೇತರನಾಗಿ, ನಂತರ ಎಸ್‌.ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು ಎಂದು ಪ್ರತಿಪಾದಿಸಿದ್ದರು.

ADVERTISEMENT

ಅರ್ಜಿಯಲ್ಲಿ ತೇಜ್ ಬಹದ್ದೂರ್ ಅವರು, ನಾಮಪತ್ರ ತಿರಸ್ಕರಿಸಿದ ಚುನಾವಣಾಧಿಕಾರಿಗಳ ಕ್ರಮವನ್ನು ರದ್ದುಪಡಿಸಬೇಕು ಹಾಗೂ ತಮ್ಮ ಪ್ರತಿವಾದಿ (ನರೇಂದ್ರ ಮೋದಿ) ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿದ್ದರು.

ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಇವರು ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯವು ಕಳೆದ ವರ್ಷದ ಮೇ ತಿಂಗಳಲ್ಲಿಯೇ ತಿರಸ್ಕರಿಸಿದ್ದು, ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಯಾವುದೇ ಸಕಾರಣವಿಲ್ಲ ಎಂದು ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.