ADVERTISEMENT

ಜಮ್ಮು ಮತ್ತು ಕಾಶ್ಮೀರ: ಎರಡು ವರ್ಷದ ನಂತರ ಶಾಲೆಗಳು ಪುನರಾರಂಭ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 14:06 IST
Last Updated 21 ಫೆಬ್ರುವರಿ 2022, 14:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಜಮ್ಮು ಪ್ರಾಂತ್ಯದ ಕೆಲವೆಡೆ ಸೋಮವಾರ ಶಾಲೆಗಳು ಪುನರಾರಂಭಗೊಂಡಿವೆ. ಜಮ್ಮು ಮತ್ತು ಕಾಶ್ಮೀರದಾದ್ಯಂತ ಕಳೆದ ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಶಾಲೆಗಳು ಸ್ಥಗಿತಗೊಂಡಿದ್ದವು.

ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳ ಭೌತಿಕ ತರಗತಿಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಸೋಮವಾರ ಮುಂಜಾನೆಯಿಂದಲೆ ಜಮ್ಮು ಪ್ರಾಂತ್ಯದಲ್ಲಿ ಶಾಲಾ ಮಕ್ಕಳು ಬಹಳ ಉತ್ಸಾಹದಿಂದ ಶಾಲೆಗಳತ್ತ ಹೆಜ್ಜೆ ಹಾಕಿದರು. ಶಾಲಾ ಸಮವಸ್ತ್ರವನ್ನು ಅಚ್ಚುಕಟ್ಟಾಗಿ ಧರಿಸಿದ್ದ ಮಕ್ಕಳು ಬಹಳ ದಿನಗಳ ನಂತರ ಶಾಲೆ ಅಂಗಳದಲ್ಲಿ ಮುಖಾಮುಖಿಯಾದ ತಮ್ಮ ಸ್ನೇಹಿತರ ಕಂಡು ಸಂಭ್ರಮಪಟ್ಟರು.

ಕೋವಿಡ್‌ ಪ್ರಕರಣಗಳು ಇಳಿಕೆ ಕಂಡ ಹಿನ್ನೆಲೆಯಲ್ಲಿ ಫೆಬ್ರುವರಿ 28ರಿಂದ ಎಲ್ಲ ಹಂತದ ಶಾಲೆಗಳು ಹಾಗೂ ಎಲ್ಲ ಬಗೆಯ ಕಾಲೇಜುಗಳ ಭೌತಿಕ ತರಗತಿಗಳನ್ನು ಆರಂಭಿಸುವುದಾಗಿಇಲ್ಲಿನ ಆಡಳಿತವು ತಿಳಿಸಿದೆ. ‘ಚಳಿಗಾಲದ ರಜೆಯ ಅವಧಿಯು ಫೆ.28ಕ್ಕೆ ಮುಗಿಯಲಿದ್ದು, ಮಾ.1ರಿಂದ ಪೂರ್ಣ ಪ್ರಮಾಣದ ಭೌತಿಕ ತರಗತಿಗಳು ಕೋವಿಡ್‌ ಮಾರ್ಗಸೂಚಿಯೊಂದಿಗೆ ಆರಂಭ ಆಗಲಿವೆ’ ಎಂದು ಸರ್ಕಾರಿ ಶಾಲೆಯೊಂದರ ಶಿಕ್ಷಕ ಗುಲಾಂ ನಬೀ ತಿಳಿಸಿದರು.

ADVERTISEMENT

' 10 ಮತ್ತು 12ನೇ ತರಗತಿಗಳಿಗೆ ಈಗಾಗಲೇ ಭೌತಿಕ ತರಗತಿಗಳು ಆರಂಭವಾಗಿವೆ. ಉಳಿದ ತರಗತಿಗಳಿಗೆ ಆಫ್‌ಲೈನ್‌ ತರಗತಿ ಆರಂಭಿಸುವ ಸಂಬಂಧ ಯಾವುದೇ ಆದೇಶ ಬಂದಿಲ್ಲ’ ಎಂದು ಕಾಶ್ಮೀರದ ಗಂದರ್‌ಬಲ್‌ನ ಹತ್‌ಬರಾ ನವೋದಯ ಶಾಲೆಯ ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಇಲ್ಲಿನ ಆಡಳಿತದ ಆದೇಶದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ವಿವಿಧ ವಿಶ್ವವಿದ್ಯಾಲಯಗಳು ಮಾರ್ಚ್‌ 1ರಿಂದ ಭೌತಿಕ ತರಗತಿಗಳನ್ನು ಆರಂಭಿಸಲು ನಿರ್ಧರಿಸಿವೆ.

2020ರ ಮಾರ್ಚ್‌ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಕೋವಿಡ್‌ ಮೊದಲ ಲಾಕ್‌ಡೌನ್‌ನಿಂದಾಗಿ ಬಂದ್‌ ಆಗಿದ್ದ ಶಾಲೆಗಳು ಸತತ ಎರಡು ವರ್ಷಗಳ ನಂತರ ( 2022ರ ಮಾ.1) ಆರಂಭವಾಗಲಿವೆ. ಈ ನಡುವೆ ಮಕ್ಕಳಿರುವ ಸ್ಥಳಗಳಲ್ಲೇ ‘ಸಮುದಾಯ ತರಗತಿಗಳು’ ನಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.