ADVERTISEMENT

ಇಮಾಂಗಳಿಗೆ ಗೌರವಧನ: ಸುಪ್ರೀಂ’ಆದೇಶ ಸಂವಿಧಾನದ ಉಲ್ಲಂಘನೆ- ಉದಯ್‌ ಮಹುರ್‌ಕರ್

ಪಿಟಿಐ
Published 26 ನವೆಂಬರ್ 2022, 12:31 IST
Last Updated 26 ನವೆಂಬರ್ 2022, 12:31 IST
   

ನವದೆಹಲಿ (ಪಿಟಿಐ): ಮಸೀದಿಗಳ ಇಮಾಮ್‌ಗಳಿಗೆ ಗೌರವಧನ ನೀಡುವ ಕುರಿತ ಸುಪ್ರೀಂ ಕೋರ್ಟ್‌ನ 1993ರ ಆದೇಶವು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಮಾಹಿತಿ ಆಯೋಗದ ಆಯುಕ್ತರು ಹೇಳಿದ್ದಾರೆ.

ಇದು, ತಪ್ಪು ಸಂಪ್ರದಾಯಕ್ಕೆ ನಾಂದಿ ಹಾಡುವ ಜೊತೆಗೆ, ರಾಜಕೀಯ ತಿಕ್ಕಾಟ ಸಾಮಾಜಿಕ ಸೌಹಾರ್ಧಕ್ಕೂ ಧಕ್ಕೆ ತರಲಿದೆ ಎಂದು ಮಾಹಿತಿ ಆಯುಕ್ತ ಉದಯ್‌ ಮಹುರ್‌ಕರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ಸರ್ಕಾರ ಮತ್ತು ವಕ್ಫ್‌ಮಂಡಳಿಯು ಇಮಾಮ್‌ಗಳಿಗೆ ನೀಡುತ್ತಿರುವ ವೇತನದ ವಿವರ ಕೋರಿದ್ದ ಅರ್ಜಿಯ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದರು. ‘ಸಾರ್ವಜನಿಕರ ತೆರಿಗೆ ಹಣವನ್ನು ನಿರ್ದಿಷ್ಟ ಧರ್ಮದ ಪರವಾಗಿ ಬಳಸಬಾರದು ಎಂಬ ಸಂವಿಧಾನದ ಆಶಯವು ಈ ಆದೇಶದಿಂದ ಉಲ್ಲಂಘನೆಯಾಗಲಿದೆ’ ಎಂದು ಹೇಳಿದರು.

ADVERTISEMENT

1993ರಲ್ಲಿ ಅಖಿಲ ಭಾರತ ಇಮಾಮ್‌ಗಳ ಸಂಘಟನೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ತಾನು ನಿರ್ವಹಿಸುವ ಮಸೀದಿಗಳ ಇಮಾಮ್‌ಗಳಿಗೆ ಗೌರವಧನ ನೀಡಬೇಕು ಎಂದು ವಕ್ಫ್‌ ಮಂಡಳಿಗೆ ಆದೇಶಿಸಿತ್ತು.

‘ಈ ಆದೇಶದ ಪ್ರತಿಯನ್ನು ಕೇಂದ್ರ ಕಾನೂನು ಸಚಿವರಿಗೆ ಕಳುಹಿಸಬೇಕು.ಪೂಜೆ, ಪ್ರಾರ್ಥನೆ ನೆರವೇರಿಸುವ ವಿವಿಧ ಧರ್ಮದವರಿಗೆ ಗೌರವಧನ ನೀಡಲು ತೆರಿಗೆ ಹಣ ಬಳಸದಂತೆ ಕ್ರಮವಹಿಸಲು ಸಂವಿಧಾನದ 25 ರಿಂದ 28ನೇ ವಿಧಿಯ ನಿಯಮಗಳನ್ನು ಅದರ ಮೂಲ ಆಶಯಗಳೊಂದಿಗೆ ಜಾರಿಗೊಳಿಸಬೇಕು’ ಎಂದು ಸೂಚಿಸಿದರು.

‘ಗೌರವಧನ ನೀಡುವ ಕುರಿತಂತೆ ಸುಪ್ರೀಂ ಕೋರ್ಟ್ 1993ರಲ್ಲಿ ನೀಡಿದ್ದ ಆದೇಶವನ್ನು ಉಲ್ಲೇಖಿಸಿದ ಅವರು, ತೆರಿಗೆ ಹಣವನ್ನು ನಿರ್ದಿಷ್ಟ ಧರ್ಮದ ಪರವಾಗಿ ಬಳಸಬಾರದು ಎಂಬ ಸಂವಿಧಾನದ ವಿಧಿ 27ರ ಉಲ್ಲಂಘನೆಯಾಗಿದೆ’ ಎಂದು ಮಾಹಿತಿ ಆಯುಕ್ತರು ಅಭಿಪ್ರಾಯಪಟ್ಟರು.

‘ಈ ಅದೇಶವು ತಪ್ಪು ಸಂಪ್ರದಾಯಕ್ಕೆ ನಾಂದಿ ಹಾಡಲಿದೆ. ಅನಗತ್ಯ ರಾಜಕೀಯ ತಿಕ್ಕಾಟ ಹಾಗೂ ಸಮಾಜದಲ್ಲಿ ಸಾಮಾಜಿಕ ಸೌಹಾರ್ದ ಕದಡಲು ಕಾರಣವಾಗಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.