ADVERTISEMENT

ಸ್ವಾರ್ಥಿಗಳು ಆರೆಸ್ಸೆಸ್‌ನಿಂದ ದೂರವೇ ಇರಲಿ: ಮೋಹನ್ ಭಾಗವತ್

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 22:12 IST
Last Updated 7 ಜನವರಿ 2023, 22:12 IST
ಮೋಹನ್ ಭಾಗವತ್‌
ಮೋಹನ್ ಭಾಗವತ್‌   

ಪಣಜಿ: ‘ಸ್ವಾರ್ಥಿಗಳು ಖಂಡಿತವಾಗಿ ಸಂಘದಿಂದ ದೂರವೇ ಇರಿ. ದೇಶವನ್ನು ಒಗ್ಗೂಡಿಸುವ ಉದ್ದೇಶ ಸಾಧನೆಗಾಗಿ ಜನರು ಸಂಘವನ್ನು ಸೇರಿ’ ಎಂದು ಮೋಹನ್ ಭಾಗವತ್ ಶನಿವಾರ ಜನತೆಗೆ ಮುಕ್ತ ಆಹ್ವಾನವನ್ನು ನೀಡಿದರು.

ಸಂಘವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಜನರು ಅಲ್ಪಾವಧಿಗಾದರೂ ಸಂಘವನ್ನು ಸೇರಬೇಕು ಎಂದು ಭಾಗವತ್‌ ಅಭಿಪ್ರಾಯಪಟ್ಟರು. ‘ಸಂಘವನ್ನು ಸೇರಿದರೆ ನಮಗೇನು ಸಿಗುತ್ತದೆ ಎಂದು ಯಾರಾದರೂ ಪ್ರಶ್ನಿಸಿದರೆ, ನನ್ನ ಉತ್ತರ ಏನೂ ಇಲ್ಲ. ಅಕಸ್ಮಾತ್‌ ಏನಾದರೂ ಸಿಕ್ಕರೂ ಅದು ಮರಳಿ ಸಮಾಜಕ್ಕೆ ಹೋಗುತ್ತದೆ. ಧೈರ್ಯವಿದ್ದರೆ ಅವರು ಬರಬಹುದು. ಸ್ವಾರ್ಥಿಗಳು ದೂರವೇ ಉಳಿದರೂ ಅವರಿಗೂ, ಸಂಘಕ್ಕೂ ಒಳ್ಳೆಯದು’ ಎಂದು ಹೇಳಿದರು.

ನಾವು ದೇಶವನ್ನು ಒಗ್ಗೂಡಿಸಲು ಬಯಸುತ್ತೇವೆ. ಅದನ್ನು ಅರ್ಥಮಾಡಿಕೊಳ್ಳುವ ಉದಾರತೆ ಇದ್ದರೆ, ಸಮಾಜದ ಈ ದೃಷ್ಟಿಕೋನದಲ್ಲಿ ಸ್ಪಷ್ಟತೆ ಸಿಗಲಿದೆ. ಸ್ವಾತಂತ್ರ್ಯ ನಂತರದಿಂದ ಈವರೆಗಿನ ದೇಶದ ಪ್ರಗತಿಯನ್ನು ಗಮನಿಸಿದರೆ, ಸಮಾಜಕ್ಕೆ ಪರ್ಯಾಯವಾಗಿ ಅಭಿವೃದ್ಧಿಯ ರೇಖೆಯನ್ನು ನೀವವು ಗುರುತಿಸುತ್ತೀರಿ‘ ಎಂದರು.

ADVERTISEMENT

‘ಸಂದರ್ಭಾನುಸಾರ ಮಾಡಬೇಕಾದ್ದನ್ನು ಕಾರ್ಯಕರ್ತರು ಮಾಡುತ್ತಾರೆ’ (ಪಣಜಿ ವರದಿ–ಪಿಟಿಐ): ‘ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕಾರ್ಯಕರ್ತರ ಮುಖೇನ ‘ಒತ್ತಡ ಹೇರುವ’ ಗುಂಪು ರಚಿಸಲು ಬಯಸುವುದಿಲ್ಲ’ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್‌ ಭಾಗವತ್ ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ದೇಶಕ್ಕೆ ಗಣನೀಯವಾದ ಕೊಡುಗೆಯನ್ನು ನೀಡುವ ಕಾರ್ಯಕರ್ತರನ್ನಷ್ಟೇ ಆರ್‌ಎಸ್‌ಎಸ್‌ ರೂಪಿಸಲಿದೆ ಎಂದು ಅವರು ಶನಿವಾರ ಇಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೇಳಿದರು.

‘ಆರ್‌ಎಸ್‌ಎಸ್‌ ಕಾರ್ಯಕರ್ತರು ವೈಯಕ್ತಿಕ ನೆಲೆಯಲ್ಲೂ ಸಾಮಾಜಿಕ ಉದ್ದೇಶದ ವಿವಿಧ ಕಾರ್ಯಗಳಲ್ಲಿ ತೊಡಗುವರು. ಅದರರ್ಥ ಆರ್‌ಎಸ್ಎಸ್‌ ಒಂದು ಸೇವಾ ಸಂಸ್ಥೆ ಎಂಬುದಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.