ADVERTISEMENT

ಆರು ತಿಂಗಳಲ್ಲಿ ಮಕ್ಕಳಿಗೆ ಕೋವಿಡ್‌ ಲಸಿಕೆ ಬಿಡುಗಡೆ: ಆದಾರ್ ಪೂನಾವಾಲಾ

ಪಿಟಿಐ
Published 14 ಡಿಸೆಂಬರ್ 2021, 10:35 IST
Last Updated 14 ಡಿಸೆಂಬರ್ 2021, 10:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ (ಪಿಟಿಐ): ‘ಮಕ್ಕಳಿಗೆ ನೀಡಲಾಗುವ ಕೋವಿಡ್‌ ಲಸಿಕೆಯನ್ನು ಆರು ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು’ ಎಂದು ಸೀರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಆದಾರ್ ಪೂನಾವಾಲಾಮಂಗಳವಾರ ತಿಳಿಸಿದರು.

ಉದ್ಯಮ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಅವರು, ‘ಕೊವೊವ್ಯಾಕ್ಸ್‌’ ಲಸಿಕೆಯು ಸದ್ಯ ಪ್ರಯೋಗ ಹಂತದಲ್ಲಿದೆ. ಇದು, ಮಕ್ಕಳಿಗೆ ಮೂರು ವರ್ಷದವರೆಗೂ ರಕ್ಷಣೆ ಒದಗಿಸಲಿದೆ’ ಎಂದು ತಿಳಿಸಿದರು.

ಸದ್ಯ, ಮಕ್ಕಳ ವಿಷಯದಲ್ಲಿ ಆತಂಕದ ಪರಿಸ್ಥಿತಿ ಇಲ್ಲ. ಆದರೂ, ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಲಾಗುವ ಲಸಿಕೆಯನ್ನು ನಾವು ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು.

ADVERTISEMENT

ಪ್ರಸ್ತುತ ದೇಶದಲ್ಲಿ 18 ವರ್ಷ ಮೀರಿದವರಿಗೆ ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಮತ್ತು ಮಾನ್ಯತೆ ಪಡೆದ ಇತರೆ ಲಸಿಕೆಗಳನ್ನು ನೀಡಲಾಗುತ್ತಿದೆ.

ಮಕ್ಕಳಿಗೆ ನೀಡುವ ಲಸಿಕೆಗೆ ಸಂಬಂಧಿಸಿ ಈಗಾಗಲೇ ಭಾರತದಲ್ಲಿ ಎರಡು ಕಂಪನಿಗಳು ಲೈಸೆನ್ಸ್‌ ಪಡೆದಿವೆ. ಈ ಕಂಪನಿಗಳ ಲಸಿಕೆಗಳೂ ಶೀಘ್ರವೇ ಲಭ್ಯವಾಗಬಹುದು ಎಂದೂ ಉಲ್ಲೇಖಿಸಿದರು.

‘ಲಸಿಕೆ ಪರಿಣಾಮಕಾರಿ ಮತ್ತು ಮಕ್ಕಳಿಗೆ ಸೋಂಕು ವಿರುದ್ಧ ರಕ್ಷಣೆ ಒದಗಿಸಲಿದೆ ಎಂಬುದಕ್ಕೆ ಪೂರಕ ಅಂಕಿಅಂಶಗಳಿವೆ. ಮಕ್ಕಳಿಗೆ ಲಸಿಕೆ ಕೊಡಿಸಬೇಕು. ಇವುಗಳಿಂದ ಅಡ್ಡಪರಿಣಾಮವಿಲ್ಲ. ಸರ್ಕಾರ ಈ ಕುರಿತು ಹೊರಡಿಸುವ ಪ್ರಕಟಣೆ ಆಧರಿಸಿ, ಅದರಂತೆಯೇ ಕ್ರಮಕೈಗೊಳ್ಳಿ’ ಎಂದು ಪೋಷಕರಿಗೆ ಸಲಹೆ ಮಾಡಿದರು.

ಕೋವಿಡ್‌ನ ರೂಪಾಂತರ ತಳಿಯಾಗಿರುವ ‘ಓಮೈಕ್ರಾನ್‌’ ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರಲಿದೆ ಎಂದು ಈಗಲೇ ಹೇಳಲಾಗದು. ಆದರೆ, ನನ್ನ ಪ್ರಕಾರ, ಗಂಭೀರ ಪರಿಣಾಮ ಬೀರಬಹುದು ಎಂದೂ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.