ADVERTISEMENT

ಗೊಗೊಯಿ ವಿರುದ್ಧ ಸಂಚು ಸಾಧ್ಯತೆ ತಳ್ಳಿಹಾಕಲಾಗದು

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

ಪಿಟಿಐ
Published 18 ಫೆಬ್ರುವರಿ 2021, 22:14 IST
Last Updated 18 ಫೆಬ್ರುವರಿ 2021, 22:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರನ್ನು ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸಿಲುಕಿಸಲು ಸಂಚು ರೂಪಿಸಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ರಂಜನ್ ಗೊಗೊಯಿ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ಅವರ ಕಚೇರಿ ಸಿಬ್ಬಂದಿ ಒಬ್ಬರು, ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ವಕೀಲ ಉತ್ಸವ್ ಬೈನ್ಸ್ ಎಂಬುವವರು, ಈ ಆರೋಪದ ಹಿಂದೆ ಸಂಚುಗಳು ಇರುವ ಸಾಧ್ಯತೆ ಇದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆನಂತರ ನಿವೃತ್ತ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್ ನೇತೃತ್ವದ‌ ತನಿಖಾ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿತ್ತು. ಈ ಸಮಿತಿಯು ಸಲ್ಲಿಸಿದ್ದ ವರದಿ ಆಧರಿಸಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ರಾಷ್ಟ್ರೀಯ ಪೌರತ್ವ ನೋಂದಣಿಗೆ ಸಂಬಂಧಿಸಿದಂತೆ ರಂಜನ್ ಗೊಗೊಯಿ ಅವರ ನಿಲುವುಗಳು, ಸುಪ್ರೀಂ ಕೋರ್ಟ್‌ನ ಕಾರ್ಯಚಟುವಟಿಕೆಗಳನ್ನು ಕ್ರಮಬದ್ಧಗೊಳಿಸುವ ಅವರ ಪ್ರಯತ್ನಗಳು ಇಂತಹ ಸಂಚು ರೂಪಿಸಲು ಕಾರಣವಾಗಿರಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ADVERTISEMENT

‘ರಾಷ್ಟ್ರೀಯ ಪೌರತ್ವ ನೋಂದಣಿಯ ಬಗ್ಗೆ ರಂಜನ್ ಗೊಗೊಯಿ ಗಂಭೀರವಾದ ನಿಲುವುಗಳನ್ನು ತೆಗೆದುಕೊಂಡಿದ್ದರು. ಇದು ಕೆಲವರಿಗೆ ಅಪಥ್ಯವಾಗಿರಬಹುದು. ಹೀಗಾಗಿ ಅವರ ಮೇಲೆ ಪ್ರಭಾವ ಬೀರಲು, ಈ ಸಂಚು ರೂಪಿಸಿರಬಹುದು’ ಎಂದು ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.

*

ಲೈಂಗಿಕ ದೌರ್ಜನ್ಯ ನಡೆದಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಈ ಸಮಿತಿಯ ಉದ್ದೇಶವಾಗಿರಲಿಲ್ಲ. ಸಂಚು ರೂಪಿಸಲಾಗಿತ್ತೇ ಎಂಬುದನ್ನು ಪತ್ತೆ ಮಾಡುವುದು ಉದ್ದೇಶವಾಗಿತ್ತು
-ಸುಪ್ರೀಂ ಕೋರ್ಟ್

*

ಸಂಚು ರೂಪಿಸಿರುವುದರ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ರಂಜನ್ ಗೊಗೊಯಿ ವಿರುದ್ಧ ಸಂಚು ರೂಪಿಸಲಾಗಿತ್ತು ಎಂಬುದನ್ನು ಇದು ಸೂಚಿಸುತ್ತದೆ
-ಉತ್ಸವ್ ಬೈನ್ಸ್, ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.