ADVERTISEMENT

ನೈಸರ್ಗಿಕ ವಿಕೋಪ: ಐದು ರಾಜ್ಯ, ಕೇಂದ್ರಾಡಳಿತ ಪ್ರದೇಶಕ್ಕೆ ₹3,113 ಕೋಟಿ ಪರಿಹಾರ

ಪಿಟಿಐ
Published 13 ಫೆಬ್ರುವರಿ 2021, 7:32 IST
Last Updated 13 ಫೆಬ್ರುವರಿ 2021, 7:32 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: 2020ರಲ್ಲಿ ಪ್ರವಾಯ, ಚಂಡಮಾರುತದಂತಹ ನೈಸರ್ಗಿಕ ವಿಕೋಪಕ್ಕೆ ಒಳಗಾಗಿರುವ ಒಂದು ಕೇಂದ್ರಾಡಳಿತ ಪ್ರದೇಶ ಮತ್ತು ನಾಲ್ಕು ರಾಜ್ಯಗಳಿಗೆ ₹3,113 ಕೋಟಿ ಪರಿಹಾರ ನೀಡಲು ಗೃಹ ಸಚಿವ ಅಮಿತ್‌ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿ ಶನಿವಾರ ಒಪ್ಪಿಗೆ ನೀಡಿದೆ.

ಆಂಧ್ರಪ್ರದೇಶ, ಬಿಹಾರ, ತಮಿಳುನಾಡು, ಪುದುಚೆರಿ ಮತ್ತು ಮಧ್ಯಪ್ರದೇಶ– ಇವು ರಾಷ್ಟ್ರೀಯ ವಿಪತ್ತು ಅಪಾಯ ನಿರ್ವಹಣಾ ನಿಧಿ(ಎನ್‌ಡಿಆರ್‌ಎಂಎಫ್‌)ಯಿಂದ ಹೆಚ್ಚುವರಿ ಕೇಂದ್ರದ ನೆರವು ಪಡೆಯುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಎಂದು ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ.

2020ರಲ್ಲಿ ನಿವಾರ್ ಮತ್ತು ಬುರೆವಿ ಚಂಡಮಾರುತ, ಪ್ರವಾಹ ಮತ್ತು ಕೀಟಗಳ ದಾಳಿಯಿಂದ ಹಾನಿಗೊಳಗಾದ ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ ಕೇಂದ್ರದ ನೆರವನ್ನು ನೀಡಲು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಮಿತಿಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ADVERTISEMENT

ಪ್ರವಾಹದಿಂದ ಹಾನಿಗೊಳಗಾದ ಆಂಧ್ರಪ್ರದೇಶಕ್ಕೆ ₹280.78 ಕೋಟಿ ಮತ್ತು ಬಿಹಾರಕ್ಕೆ ₹1,255.27 ಕೋಟಿ ನೀಡಲಾಗಿದೆ. ನಿವಾರ್ ಹಾಗೂ ಬುರೆವಿ ಚಂಡಮಾರುತದಿಂದ ನಲುಗಿದ ತಮಿಳುನಾಡುಗೆ ಕ್ರಮವಾಗಿ ₹63.14 ಕೋಟಿ ಮತ್ತು ₹255.77 ಕೋಟಿ ನೀಡಲು ಅನುಮೋದಿಸಲಾಗಿದೆ.

ನಿವಾರ್ ಚಂಡಮಾರುತದ ದಾಳಿಯಿಂದ ಹಾನಿಗೊಳಗಾದ ಕೇಂದ್ರಾಳಿತ ಪ್ರದೇಶ ಪುದುಚೆರಿಗೆ ₹9.91 ಕೋಟಿ, ಕೀಟಬಾಧೆಯಿಂದ ಹಾನಿಗೊಳಗಾದ ಮಧ್ಯಪ್ರದೇಶಕ್ಕೆ ₹1,280 ಕೋಟಿ ಹಣ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.