ADVERTISEMENT

ಶಾಹಿ ಈದ್ಗಾ ವಿವಾದ: ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತೀರಾ; ಸುಪ್ರೀಂ

ಮುಸ್ಲಿಂ ಪರ ಅರ್ಜಿದಾರರಿಗೆ ‘ಸುಪ್ರೀಂ’ ಪ್ರಶ್ನೆ

ಪಿಟಿಐ
Published 17 ಸೆಪ್ಟೆಂಬರ್ 2024, 14:21 IST
Last Updated 17 ಸೆಪ್ಟೆಂಬರ್ 2024, 14:21 IST
ಶಾಹಿ ಈದ್ಗಾ 
ಶಾಹಿ ಈದ್ಗಾ    

ನವದೆಹಲಿ: ಮಥುರಾ ಕೃಷ್ಣ ಜನ್ಮಭೂಮಿ– ಶಾಹಿ ಈದ್ಗಾ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್‌ ಹೈಕೋರ್ಟ್‌ನ ಏಕಸದಸ್ಯ ಪೀಠವು ಆಗಸ್ಟ್‌ 1ರಂದು ನೀಡಿದ್ದ ತೀರ್ಪನ್ನು ಅದೇ ಹೈಕೋರ್ಟ್‌ನ ವಿಭಾಗೀಯ ಪೀಠದ ಎದುರು ಪ್ರಶ್ನಿಸುತ್ತೀರಾ ಎಂದು ಸುಪ್ರೀಂ ಕೋರ್ಟ್‌ ಮುಸ್ಲಿಂ ಪರ ಅರ್ಜಿದಾರರನ್ನು ಮಂಗಳವಾರ ಪ್ರಶ್ನಿಸಿತು.

ಕೃಷ್ಣ ಜನ್ಮಭೂಮಿ– ಶಾಹಿ ಈದ್ಗಾ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂ ಪರ ಅರ್ಜಿದಾರರು ಸಲ್ಲಿಸಿದ್ದ 18 ಮೊಕದ್ದಮೆಗಳ ವಿಚಾರಣಾಯೋಗ್ಯತೆ ಪ್ರಶ್ನಿಸಿ ಮುಸ್ಲಿಂ ಪರ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ಆಗಸ್ಟ್‌ 1ರಂದು ತಿರಸ್ಕರಿಸಿತ್ತು. 

‘ಈ ಕೋರ್ಟ್‌ ಹಿಂದೆ ನೀಡಿರುವ ಕೆಲ ಆದೇಶಗಳ ಆಧಾರಲ್ಲಿ ನೀವು ಮೇಲ್ಮನವಿ ಸಲ್ಲಿಸಬಹುದು ಎಂದು ಹೇಳುತ್ತಿದ್ದೇವೆ. ನೀವು ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುವುದೇ ಆದರೆ ಈಗ ಸುಪ್ರೀಂ ಕೋರ್ಟ್‌ ಸಲ್ಲಿಸಿರುವ ಮೇಲ್ಮನವಿಯನ್ನು ಹಿಂಪಡೆಯಿರಿ’ ಎಂದು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ಸಂಜಯ್‌ ಕುಮಾರ್‌ ಅವರಿದ್ದ ಪೀಠವು ಮುಸ್ಲಿಂ ಪರ ಅರ್ಜಿದಾರರಿಗೆ ಸೂಚಿಸಿತು. ಮೊಕದ್ದಮೆಗೆ ಸಂಬಂಧಿಸಿದ ಮುಂದಿನ ವಿಚಾರಣೆಯನ್ನು ನವೆಂಬರ್‌ 4ಕ್ಕೆ ನಿಗದಿಪಡಿಸಿತು.

ADVERTISEMENT

ಹಿಂದೂ ಪರ ಅರ್ಜಿದಾರರು ಸಲ್ಲಿಸಿರುವ ಅರ್ಜಿಗಳು, ಕೃಷ್ಣ ಜನ್ಮಭೂಮಿ ದೇವಸ್ಥಾನದ ಪಕ್ಕದಲ್ಲಿ ಇರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಬೇಕು ಎಂಬ ಕೋರಿಕೆಯನ್ನು ಹೊಂದಿವೆ. ಅಲ್ಲದೆ, ದೇವಸ್ಥಾನ ಹಾಗೂ ಮಸೀದಿ ಇರುವ 13.37 ಎಕರೆ ಜಮೀನಿನ ಹಕ್ಕು ತಮಗೆ ಸಿಗಬೇಕು ಎಂದು ಹಿಂದೂ ಅರ್ಜಿದಾರರು ಕೋರಿದ್ದಾರೆ. ಆದರೆ, ಈ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಳ್ಳಲು ಪೂಜಾ ಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆ – 1991ರ ಅಡಿಯಲ್ಲಿ ನಿರ್ಬಂಧ ಇದೆ ಎಂದು ಮಸೀದಿ ಸಮಿತಿ ಈ ಹಿಂದೆ ವಾದ ಮಂಡಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.