ADVERTISEMENT

ಬಿಜೆಪಿ ಗೆದ್ದರೂ ಮೋದಿಗೆ ಪಟ್ಟ ಅನುಮಾನ: ಪವಾರ್

ಸ್ಪರ್ಧೆ ಇಲ್ಲ ಎಂದು ಪುನರುಚ್ಚರಿಸಿದ ಎನ್‌ಸಿಪಿ ನಾಯಕ

ಪಿಟಿಐ
Published 13 ಮಾರ್ಚ್ 2019, 20:12 IST
Last Updated 13 ಮಾರ್ಚ್ 2019, 20:12 IST
ಶರದ್ ಪವಾರ್
ಶರದ್ ಪವಾರ್   

ಮುಂಬೈ : ಲೋಕಸಭಾ ಚುಣಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ನರೇಂದ್ರ ಮೋದಿ ಅವರಿಗೆ ಎರಡನೇ ಅವಧಿಗೆ ಪ್ರಧಾನಿ ಗದ್ದುಗೆ ಸಿಗುವುದು ಅನುಮಾನ ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಬುಧವಾರ ಹೇಳಿದ್ದಾರೆ.

‘ಚುನಾವಣೆ ಬಳಿಕ ಬಿಜೆಪಿಗೆ ಹೆಚ್ಚು ಸ್ಥಾನ ಲಭ್ಯವಾದರೂ ಸರ್ಕಾರ ರಚನೆಗೆ ಮೈತ್ರಿಕೂಟದ ಇತರೆ ಪಕ್ಷಗಳ ಸಹಾಯ ಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮೋದಿ ಅವರಿಗೆ ಮತ್ತೆ ಅಧಿಕಾರ ಸಿಗುವ ಸಾಧ್ಯತೆ ಕಡಿಮೆ’ ಎಂಬುದು ಪವಾರ್ ಅವರ ಅಭಿಪ್ರಾಯ.

ಸ್ಪರ್ಧೆ ಇಲ್ಲ– ಪವಾರ್ ಪುನರುಚ್ಚಾರ:ತಾವು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬುದನ್ನು ಪುನರುಚ್ಚರಿಸಿದ ಪವಾರ್, ಕುಟುಂಬ ಸದಸ್ಯರಿಗೆ ದಾರಿ ಮಾಡಿಕೊಡುವುದು ತಮ್ಮ ನಿರ್ಧಾರದ ಹಿಂದಿರುವ ಉದ್ದೇಶ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಕುಟುಂಬದ ಇಬ್ಬರು ಈ ಬಾರಿ ಸ್ಪರ್ಧೆಗೆ ಇಳಿಯುತ್ತಿರುವ ಕಾರಣ ತಾವು ಹಿಂದೆ ಸರಿಯುತ್ತಿರುವುದಾಗಿ ಹೇಳಿದ್ದಾರೆ. ಪವಾರ್ ಅವರ ಸಂಬಂಧಿ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಮಗ ಪಾರ್ಥ ಪವಾರ್ ಅವರು ಮಾವಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

‘ಮಾಧಾ ಕ್ಷೇತ್ರದಿಂದ ಹಿಂದೆ ಸರಿಯುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಹಲವರು ಕೇಳಿಕೊಂಡಿದ್ದರು. ನನಗೀಗ 79 ವರ್ಷ ವಯಸ್ಸು. ಇದು ನಿಲ್ಲಿಸುವ ಸಮಯ’ ಎಂದು ಪವಾರ್ ಹೇಳಿದ್ದಾರೆ.

‘ಜನರ ಕಳಕಳಿಯ ಬಗ್ಗೆ ನನಗೆ ಗೌರವವಿದೆ. ಆದರೆ ಮಾಧಾ ಕ್ಷೇತ್ರದ ಹಾಲಿ ಸಂಸದ ವಿಜಯಸಿಂಹ ಮೋಹಿತ್ ಪಟೇಲ್ ಅವರೇ ಈ ಬಾರಿಯೂ ಗೆದ್ದು ಬರಲಿ ಎಂಬುದು ನನ್ನ ವೈಯಕ್ತಿಕ ಅಭಿಲಾಷೆ’ ಎಂದು ಹೇಳಿದ್ದಾರೆ.

ಕಣದಿಂದ ಹಿಂದೆ ಸರಿದಿರುವುದು ಸೋಲೊಪ್ಪಿಕೊಂಡಂತೆ ಎಂದಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿಕೆಗೆ ತಿರುಗೇಟು ನೀಡಿದ್ದ ಪವಾರ್, ‘ವಿಧಾನಸಭೆ ಮತ್ತು ಲೋಕಸಭೆ ಸೇರಿ 14 ಬಾರಿ ಜಯ ಗಳಿಸಿದ್ದೇನೆ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.