ADVERTISEMENT

ರೈಲಿನಲ್ಲಿ ಧೂಮಪಾನ ಮಾಡಿದರೆ ಕಠಿಣ ಕ್ರಮ, ಭಾರಿ ದಂಡಕ್ಕೆ ರೈಲ್ವೆ ಇಲಾಖೆ ಚಿಂತನೆ

ಪಿಟಿಐ
Published 20 ಮಾರ್ಚ್ 2021, 12:18 IST
Last Updated 20 ಮಾರ್ಚ್ 2021, 12:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರೈಲಿನಲ್ಲಿ ಧೂಮಪಾನ ಮತ್ತು ಇದರಿಂದಾಗಿ ಸಾರ್ವಜನಿಕ ಆಸ್ತಿಗೆ ಹಾನಿ ಉಂಟಾದ ಸಂದರ್ಭದಲ್ಲಿ ಲೋಪ ಎಸಗುವ ‌ಪ್ರಯಾಣಿಕನ ಬಂಧನ ಸೇರಿದಂತೆ ಭಾರಿ ಮೊತ್ತದ ದಂಡ ವಿಧಿಸಲು ಚಿಂತನೆ ನಡೆದಿದೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶತಾಬ್ದಿ ಎಕ್ಸ್ಪ್ರೆಸ್‌ ರೈಲಿನ ಬೋಗಿಯೊಂದರಲ್ಲಿ ಈಚೆಗೆ ಸಂಭವಿಸಿದ್ದ ಬೆಂಕಿ ಆಕಸ್ಮಿಕ ಘಟನೆಯ ಹಿಂದೆಯೇ ಜಾಗೃತಗೊಂಡಿರುವ ಇಲಾಖೆಯು ಈ ಸಂಬಂಧ ತಪಾಸಣೆಯನ್ನು ಚುರುಕುಗೊಳಿಸಲು ತೀರ್ಮಾನಿಸಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.

ಪ್ರಾಥಮಿಕ ತನಿಖೆ ಪ್ರಕಾರ, ಮಾರ್ಚ್‌ 13ರಂದು ನವದೆಹಲಿ–ಡೆಹ್ರಾಡೂನ್‌ ನಡುವಣ ಶತಾಬ್ದಿ ಎಕ್ಸ್‌ಪ್ರೆಸ್‌ನ ಎಸ್‌5 ಬೋಗಿಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಿಡಿ ಇದ್ದ ಸಿಗರೇಟು ಅಥವಾ ಬೀಡಿಯನ್ನು ಶೌಚಾಲಯದ ಕಸದಬುಟ್ಟಿಗೆ ಎಸೆದಿರುವುದು ಕಾರಣ. ಇದು, ಅಲ್ಲಿನ ಟಿಷ್ಯೂ ಕಾಗದದ ಜೊತೆಗೆ ಸಂಪರ್ಕಕ್ಕೆ ಬಂದು ಬೆಂಕಿ ಹೊತ್ತಿಕೊಂಡಿದೆ.

ADVERTISEMENT

ರೈಲ್ವೆ ಕಾಯ್ದೆಯ ಸೆಕ್ಷನ್ 167ರ ಪ್ರಕಾರ, ನಿರ್ಬಂಧದ ನಡುವೆಯೂ ಯಾರಾದರೂ ಧೂಮಪಾನ ಮಾಡುತ್ತಿದ್ದು, ಸಹ ಪ್ರಯಾಣಿಕರು ಆಕ್ಷೇಪವಿದ್ದಲ್ಲಿ ₹ 100ವರೆಗೂ ದಂಡ ವಿಧಿಸಲು ಅವಕಾಶವಿದೆ.

ಕೇಂದ್ರ ರೈಲ್ವೆ ಸಚಿವ ಪೀಯೂಶ್‌ ಗೋಯಲ್ ಅವರು ಈಚೆಗೆ ರೈಲ್ವೆ ಮಂಡಳಿಯ ಸದಸ್ಯರು ಮತ್ತು ವಲಯಗಳ ಪ್ರಧಾನ ವ್ಯವಸ್ಥಾಪಕರ ಜೊತೆಗೆ ಚರ್ಚಿಸಿದ್ದು, ಇಂಥ ಪ್ರಕರಣ ತಡೆಗೆ ಕ್ರಮವಹಿಸುವಂತೆ ಸೂಚಿಸಿದ್ದರು.

ನಾವು ವಿವಿಧ ದಂಡ ಪ್ರಯೋಗಿಸಲು ಚಿಂತನೆ ನಡೆಸಿದ್ದೇವೆ. ಕೆಲ ಪ್ರಕರಣಗಳಲ್ಲಿ, ಸಾರ್ವಜನಿಕ ಆಸ್ತಿ ಜಖಂಗೊಳಿಸಿದ ಹಾಗೂ ಸಹ ಪ್ರಯಾಣಿಕರ ಜೀವಕ್ಕೆ ಆಪತ್ತು ತರುವುದು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಲೋಪ ಎಸಗುವ ಪ್ರಯಾಣಿಕರ ಮೇಲೆ ಹೆಚ್ಚಿನ ದಂಡ ವಿಧಿಸಲು ಚಿಂತನೆ ನಡೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನ ಬೆಂಕಿ ಆಕಸ್ಮಿಕ ಘಟನೆಯ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಸಹ ಪ್ರಯಾಣಿಕರೊಬ್ಬರು ಈ ಕುರಿತು ನಾಲ್ವರು ಸದಸ್ಯರ ತನಿಖಾ ತಂಡಕ್ಕೆ ಲಿಖಿತ ಹೇಳಿಕೆ ನೀಡಿದ್ದಾರೆ. ತಕ್ಷಣ ಕ್ರಮಕೈಗೊಂಡ ಕಾರಣ ದೊಡ್ಡ ದುರಂತವೊಂದು ತಪ್ಪಿತ್ತು ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.