ADVERTISEMENT

ಜ.23ರಂದು ಶಿವಸೇನಾ (ಯುಬಿಟಿ) ಬೃಹತ್‌ ಸಮಾವೇಶ

ಬಾಳಾಸಾಹೇಬ್ ಠಾಕ್ರೆ ಜಯಂತಿ ಅಂಗವಾಗಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 15:54 IST
Last Updated 24 ಡಿಸೆಂಬರ್ 2023, 15:54 IST
ಸಂಜಯ್‌ ರಾವುತ್‌
ಸಂಜಯ್‌ ರಾವುತ್‌   

ಮುಂಬೈ: ಶಿವಸೇನಾ ಸಂಸ್ಥಾಪಕ, ಹಿಂದುತ್ವ ಸಿದ್ಧಾಂತವಾದಿ ಬಾಳಾಸಾಹೇಬ್‌ ಠಾಕ್ರೆ ಅವರ ಜಯಂತಿ ದಿನವಾದ ಜನವರಿ 23ರಂದು ಬೃಹತ್‌ ಸಮಾವೇಶ ಮತ್ತು ಸಾರ್ವಜನಿಕ ರ‍್ಯಾಲಿಯನ್ನು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಆಯೋಜಿಸಲು ಶಿವಸೇನಾ (ಯುಬಿಟಿ) ಸಿದ್ಧತೆ ಮಾಡಿಕೊಳ್ಳುತ್ತಿದೆ.

ನಾಸಿಕ್‌ನ ಹುತಾತ್ಮ ಅನಂತ್‌ ಕಾನ್ಹೆರೆ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪಕ್ಷದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಸೇರಿ ಪಕ್ಷದ ಹಲವು ಪ್ರಮುಖರು ರ‍್ಯಾಲಿಯಲ್ಲಿ ಮಾತನಾಡಲಿದ್ದಾರೆ. ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಲು ಪಕ್ಷದ ಮುಖ್ಯ ವಕ್ತಾರ, ರಾಜ್ಯಸಭಾ ಸದಸ್ಯ ಸಂಜಯ್‌ ರಾವುತ್‌ ಅವರು ವಾರಾಂತ್ಯದಲ್ಲಿ ನಾಸಿಕ್‌ಗೆ ತೆರಳಿದ್ದರು. 

‘2024ರ ಜನವರಿ 23ರಂದು ಮಹಾ– ಶಿಬಿರ ಮತ್ತು ಅಧಿವೇಶನ ನಡೆಯಲಿದೆ ಎಂದು ಸಂಜಯ್‌ ರಾವುತ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮಮಂದಿರದ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮವು ಜನವರಿ 22ರಂದು ನಡೆಯಲಿದೆ. ಇದೇ ವೇಳೆ ಶಿವಸೇನಾ (ಯುಬಿಟಿ) ಈ ಕಾರ್ಯಕ್ರಮವನ್ನು ಆಯೋಜಿಸಿದೆ.

2022ರಲ್ಲಿ ಶಿವಸೇನಾ ವಿಭಜನೆಗೊಂಡು ಎರಡು ಬಣಗಳಾದ ಬಳಿಕ, ಶಿವಸೇನಾ (ಯುಬಿಟಿ) ಪಕ್ಷವನ್ನು ಪುನರುಜ್ಜೀವನಗೊಳಿಸುವುದು ಉದ್ಧವ್‌ ಠಾಕ್ರೆ ಅವರ ಎದುರಿರುವ ಪ್ರಮುಖ ಸವಾಲಾಗಿದೆ. ವಿಧಾನಸಭೆ, ಲೋಕಸಭೆ, ಪ್ರಮುಖ ನಗರಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು 2024ರಲ್ಲಿ ಮಹಾರಾಷ್ಟ್ರವು ಎದುರಿಸಲಿದೆ. ಕಾಂಗ್ರೆಸ್‌, ಶರದ್ ಪವಾರ್‌ ನೇತೃತ್ವದ ಎನ್‌ಸಿಪಿ ಜೊತೆಗೂಡಿ ಚುನಾವಣೆ ಎದುರಿಸಲಿರುವ ಶಿವಸೇನಾ (ಯುಬಿಟಿ) ಪಕ್ಷಕ್ಕೆ ಪಕ್ಷವನ್ನು ಸಂಘಟಿಸುವುದು ಮಹತ್ವದ ವಿಚಾರವಾಗಿದೆ.

ಬಾಳಾಸಾಹೇಬ್‌ ಠಾಕ್ರೆ ಅವರು ಪ್ರಮುಖ ಹಿಂದುತ್ವ ಸಿದ್ಧಾಂತವಾದಿ ನಾಯಕರಲ್ಲಿ ಒಬ್ಬರು. ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರ ಜೊತೆ ಸೇರಿ ರಾಮ ಜನ್ಮಭೂಮಿ ಆಂದೋಲನದಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.