ADVERTISEMENT

ಐಟಿ ಕಾಯ್ದೆಯ ರದ್ದಾಗಿರುವ ಸೆಕ್ಷನ್ ಅಡಿ ಪ್ರಕರಣ: ಕೇಂದ್ರಕ್ಕೆ ಸುಪ್ರೀಂ ನೋಟಿಸ್‌

ಪಿಟಿಐ
Published 5 ಜುಲೈ 2021, 12:20 IST
Last Updated 5 ಜುಲೈ 2021, 12:20 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿನ ಸೆಕ್ಷನ್ 66ಎ ಆರು ವರ್ಷಗಳ ಹಿಂದೆ ರದ್ದಾಗಿದ್ದರೂ ಅದರ ಅಡಿಯಲ್ಲಿ ಈಗಲೂ ಪ್ರಕರಣಗಳು ದಾಖಲಾಗುತ್ತಿರುವುದನ್ನು ‘ಅಚ್ಚರಿ‘ ಮತ್ತು ‘ಅಘಾತಕಾರಿ‘ ಎಂದಿರುವ ಸುಪ್ರೀಂ ಕೋರ್ಟ್‌, ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿದೆ.

ಸೆಕ್ಷನ್‌ 66ಎ ಅಡಿಯಲ್ಲಿ ಪ್ರಕರಣಗಳು ದಾಖಲಾಗುತ್ತಿರುವುದನ್ನು ಪ್ರಶ್ನಿಸಿ, 'ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್' (ಪಿಯುಸಿಎಲ್) ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಆರ್‌.ಎಫ್‌.ನರೀಮನ್, ಕೆ.ಎಂ.ಜೋಸೆಫ್ ಮತ್ತು ಬಿ. ಆರ್. ಗವಾಯಿ ಅವರನ್ನೊಳಗೊಂಡ ನ್ಯಾಯಪೀಠ ನಡೆಸಿತು.

ಸುಪ್ರೀಂಕೋರ್ಟ್‌, 2015ರಲ್ಲಿ ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ 66ಎ ಸೆಕ್ಷನ್‌ ರದ್ದುಗೊಳಿಸಿ ತೀರ್ಪು ನೀಡಿತ್ತು. ಈಗ ಈ ಸೆಕ್ಷನ್‌ ಅಡಿ ಪ್ರಕರಣ ದಾಖಲಿಸುವುದು ನಿಮಗೆ ‘ಅದ್ಭುತ‘ ಮತ್ತು ಆಘಾತಕಾರಿ‘ ಎಂದು ಅನ್ನಿಸುತ್ತಿಲ್ಲವೇ‘ ಎಂದು ಪಿಯುಸಿಎಲ್‌ ಸಂಸ್ಥೆ ಪರ ಹಾಜರಾದ ಹಿರಿಯ ವಕೀಲ ಸಂಜಯ್ ಪಾರಿಖ್ ಅವರನ್ನು ನ್ಯಾಯಪೀಠ ಕೇಳಿತು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಪಾರಿಖ್ ಅವರು, ‘ಮಾರ್ಚ್ 24, 2015 ರ ಶ್ರೇಯಾ ಸಿಂಘಾಲ್‌ ಪ್ರಕರಣದ ತೀರ್ಪು ಕುರಿತು ಎಲ್ಲಾ ರಾಜ್ಯ ಸರ್ಕಾರಗಳು ಪೊಲೀಸ್ ಸಿಬ್ಬಂದಿಯಲ್ಲಿ ಜಾಗೃತಿ ಮೂಡಿಸಬೇಕು ಎಂದು ಸುಪ್ರೀಂ ಕೋರ್ಟ್‌ 2019ರಲ್ಲಿ ಸ್ಪಷ್ಟ ನಿರ್ದೇಶನ ನೀಡಿತ್ತು. ಇದರ ಹೊರತಾಗಿಯೂ, ಈ ಸೆಕ್ಷನ್ ಅಡಿಯಲ್ಲಿ ಸಾವಿರಾರು ಪ್ರಕರಣಗಳು ದಾಖಲಾಗುತ್ತಿವೆ‘ ಎಂದು ವಿವರಿಸಿದರು.

‘ಆ ಸೆಕ್ಷನ್‌ ಅಡಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆಯನ್ನು ನಾವು ಗಮನಿಸಿದ್ದೇವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ, ಕ್ರಮ ಕೈಗೊಳ್ಳುತ್ತೇವೆ‘ ಎಂದು ನ್ಯಾಯಪೀಠ ಪಾರಿಖ್‌ ಅವರಿಗೆ ಭರವಸೆ ನೀಡಿತು.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ‘ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಎ – ಅಡಿ ಟಿಪ್ಪಣಿಯಲ್ಲಿ ‘ಈ ನಿಬಂಧನೆಯನ್ನು ರದ್ದುಪಡಿಸಲಾಗಿದೆ‘ ಎಂದು ಬರೆಯಲಾಗಿದೆ. ಆದರೂ ಪೊಲೀಸ್ ಅಧಿಕಾರಿಗಳು ಈ ನಿಬಂಧನೆಯನ್ನು ಗಮನಿಸದೇ, ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಹೀಗಾಗಿ, ಈಗ ನಾವು ಸೆಕ್ಷನ್ 66 ಎ ನಂತರ ಕಂಸದಲ್ಲಿ(ಬ್ರಾಕೆಟ್‌) ಈ ಸೆಕ್ಷನ್‌ ಅನ್ನು ರದ್ದುಗೊಳಿಸಲಾಗಿದೆ ಎಂದು ನಮೂದಿಸಿ ಅಡಿ ಟಿಪ್ಪಣಿಯಲ್ಲಿ ತೀರ್ಪಿನ ಸಂಪೂರ್ಣ ಸಾರವನ್ನು ಹಾಕಬಹುದು‘ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ನ್ಯಾಯಮೂರ್ತಿ ನರೀಮನ್ ಅವರು, ‘ಈ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್‌ ನೀಡಲಾಗಿದೆ. ನೀವು ದಯವಿಟ್ಟು ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಿ ಎಂದು ವೇಣುಗೋಪಾಲ್ ಅವರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.