ADVERTISEMENT

ಆಸ್ಪತ್ರೆಯಲ್ಲಿ ರೋಗಿಯ ರಕ್ತ ನೆಕ್ಕಿದ ನಾಯಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 15:41 IST
Last Updated 3 ನವೆಂಬರ್ 2022, 15:41 IST
   

ಲಖನೌ: ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿಯೊಂದು ರೋಗಿಯ ದೇಹದಿಂದ ಸ್ರವಿಸಿರುವ ರಕ್ತ ನೆಕ್ಕುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ಹರಿದಾಡಿದೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಜಿಲ್ಲಾ ಆಸ್ಪತ್ರೆಯ ವಾರ್ಡ್‌ವೊಂದರಲ್ಲಿ ನೆಲದ ಮೇಲೆ ಪ್ರಜ್ಞಾಹೀನನಾಗಿ ಮಲಗಿರುವಾಗ ನಾಯಿಯೊಂದು ಆತನ ದೇಹದಿಂದ ಸ್ರವಿಸಿರುವ ರಕ್ತವನ್ನು ನೆಕ್ಕುತ್ತಿರುವ ದೃಶ್ಯ ಈ ವಿಡಿಯೊದಲ್ಲಿದೆ. ಆತನಿಗೆ ಚಿಕಿತ್ಸೆ ನೀಡಲು ವಾರ್ಡ್‌ನಲ್ಲಿ ಸಿಬ್ಬಂದಿಯೇ ಇರಲಿಲ್ಲ ಎಂಬುದೂ ಈ ವಿಡಿಯೊದಿಂದ ಗೊತ್ತಾಗಿದೆ. ಈ ವಿಡಿಯೊವನ್ನು ಮಂಗಳವಾರ ಚಿತ್ರೀಕರಿಸಲಾಗಿತ್ತು ಎಂದು ಹೇಳಲಾಗಿದೆ.

‘ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಆಡಳಿತವು ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಆರು ಸಿಬ್ಬಂದಿಯನ್ನು ವಜಾಗೊಳಿಸಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಈ ಘಟನೆಯಿಂದ ಆಸ್ಪತ್ರೆಯ ಘನತೆಗೆ ಧಕ್ಕೆಯಾಗಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಕರ್ತವ್ಯದಲ್ಲಿದ್ದ ವೈದ್ಯರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.