ADVERTISEMENT

ಇ.ಡಿ, ಸಿಬಿಐ ಶೋಧ ರಾಜಕೀಯ ಪ್ರೇರಿತ 2017ರಲ್ಲೂ ಹೀಗೇ ಆಗಿತ್ತು: ನಿತೀಶ್‌ ಕುಮಾರ್‌

ಪಿಟಿಐ
Published 11 ಮಾರ್ಚ್ 2023, 13:22 IST
Last Updated 11 ಮಾರ್ಚ್ 2023, 13:22 IST
ನಿತೀಶ್‌ ಕುಮಾರ್‌
ನಿತೀಶ್‌ ಕುಮಾರ್‌   

ಪಟ್ನಾ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಮತ್ತು ಅವರ ಕುಟುಂಬಸ್ಥರ ನಿವಾಸಗಳಲ್ಲಿ ಸಿಬಿಐ ಮತ್ತು ಜಾರಿನಿರ್ದೇಶನಾಲಯ ನಡೆಸುತ್ತಿರುವ ಪರಿಶೀಲನೆಯು ರಾಜಕೀಯ ಪ್ರೇರಿತ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.

ಕಳಂಕಿತ ರಾಜಕಾರಣಿಗಳನ್ನು ಸಮರ್ಥಿಸಿಕೊಂಡರೆ ಪ್ರಾಮಾಣಿಕರೆಂಬ ತಮ್ಮ ವರ್ಚಸ್ಸಿಗೆ ಹಾನಿಯುಂಟಾಗುತ್ತದೆ ಎಂಬ ಆತಂಕದಿಂದ ನಿತೀಶ್‌ ಕುಮಾರ್‌ ಈ ವಿಷಯದಲ್ಲಿ ಮೌನವಾಗಿದ್ದಾರೆ ಎಂಬ ಊಹಾಪೋಹಗಳನ್ನು ಅವರು ತಳ್ಳಿಹಾಕಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನೇನು ಹೇಳಲಿ, 2017ರಲ್ಲೂ (ಬಿಜೆಪಿಗೆ ವಿರುದ್ಧವಾಗಿದ್ದಾಗ) ಹೀಗೇ ಆಗಿತ್ತು. ಈಗ ಮತ್ತೆ ಆರ್‌ಜೆಡಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ, ಮತ್ತೆ ಅದೇ ರೀತಿಯ ಘಟನೆ ಘಟಿಸುತ್ತಿದೆ’ ಎಂದು ಹೇಳಿದರು.

ADVERTISEMENT

ಆಗ‌ ಹೋಟೆಲ್‌ಗೆ ಭೂಮಿ ನೀಡಿದ ಪ್ರಕರಣದಲ್ಲಿ ತೇಜಸ್ವಿ ಯಾದವ್‌ ವಿರುದ್ಧ ಆರೋಪ ಕೇಳಿಬಂದಿತ್ತು. ನೈತಿಕ ತಳಹದಿಯ ಮೇಲೆ ದೋಷಮುಕ್ತರಾಗುವರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನಿತೀಶ್‌ ಕುಮಾರ್ ಕೇಳಿದ್ದರು. ಇದಕ್ಕೆ ಆರ್‌ಜೆಡಿ ಒಪ್ಪಿಗೆ ನೀಡಿರಲಿಲ್ಲ. ಬಳಿಕ ನಿತೀಶ್‌ ಕುಮಾರ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಅವರು ಬಿಜೆಪಿ ಜೊತೆ ಸೇರಿ 24 ಗಂಟೆಯೊಳಗಾಗಿ ಸರ್ಕಾರ ರಚಿಸಿದ್ದರು.

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ಡಿ ದೇವಿ ಹಾಗೂ ಅವರ ಮೂವರು ಪುತ್ರಿಯರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಲಾಲು ಪುತ್ರ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರಿಗೂ ಸಿಬಿಐ ಸಮನ್ಸ್‌ ಜಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.