ADVERTISEMENT

ಏಕಬಳಕೆಯ ಪ್ಲಾಸ್ಟಿಕ್ ಎಂದರೇನು? ಯಾವುದಕ್ಕೆಲ್ಲ ನಿಷೇಧ?

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 9:33 IST
Last Updated 1 ಜುಲೈ 2022, 9:33 IST
   

ನವದೆಹಲಿ: ಪ್ಲಾಸ್ಟಿಕ್ ತ್ಯಾಜ್ಯದ ಅಪಾಯಗಳನ್ನು ಪರಿಗಣಿಸಿ, ಮಾಲಿನ್ಯವನ್ನು ನಿಯಂತ್ರಿಸುವ ಪ್ರಯತ್ನದ ಭಾಗವಾಗಿ ದೇಶದಲ್ಲಿ ಏಕಬಳಕೆಯ ಪ್ಲಾಸ್ಟಿಕ್‌ನ ಮೇಲೆ ನಿಷೇಧ ಹೇರಲಾಗಿದೆ.

‘ಪರಿಸರ ಸಂರಕ್ಷಣಾ ಕಾಯ್ದೆಯ (ಇಪಿಎ) ಅಡಿಯಲ್ಲಿ 19 ಬಗೆಯ ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ಹಂತಹಂತವಾಗಿ ಹೊರಹಾಕಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ ಕಾಯ್ದೆಯ ಸೆಕ್ಷನ್ 15ರ ಅಡಿಯಲ್ಲಿ ₹ 1 ಲಕ್ಷ ನಗದು ದಂಡ ಅಥವಾ 5 ವರ್ಷಗಳ ಕಾಲ ವಿಸ್ತರಿಸಬಹುದಾದ ಜೈಲುಶಿಕ್ಷೆಯನ್ನು ವಿಧಿಸಬಹುದಾಗಿದೆ’ ಎಂದು ಪರಿಸರ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ಉದ್ಯಮಗಳ ಪ್ರತಿನಿಧಿಗಳು ನಿಷೇಧಕ್ಕೆ ಸಿದ್ಧರಿಲ್ಲವಲ್ಲ ಎನ್ನುವ ಪ್ರಶ್ನೆಗೆ, ‘2022ರ ಜುಲೈ 1ರೊಳಗೆ 19 ಬಗೆಯ ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ಹಂತಹಂತವಾಗಿ ತೆಗೆದುಹಾಕುವ ಅಧಿಸೂಚನೆಯನ್ನು 2021ರ ಆಗಸ್ಟ್‌ನಲ್ಲಿ ಹೊರಡಿಸಲಾಗಿದೆ. ಇಂಥ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುವವರಿಗೆ ನಾವು ಸಾಕಷ್ಟು ಕಾಲಾವಕಾಶವನ್ನೂ ನೀಡಿದ್ದೇವೆ. ಭವಿಷ್ಯದ ದೃಷ್ಟಿಯಿಂದ ಅವರಿಗೆ ಈ ಬಗ್ಗೆ ಅರ್ಥ ಮಾಡಿಸಿದ್ದೇವೆ. ಇದಕ್ಕೆ ಬಹುತೇಕರು ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಉತ್ತರಿಸಿದ್ದಾರೆ.

ADVERTISEMENT

ಏಕಬಳಕೆಯ ಪ್ಲಾಸ್ಟಿಕ್ ಎಂದರೇನು?

ಏಕಬಳಕೆಯ ಪ್ಲಾಸ್ಟಿಕ್‌ಗಳು ಮೂಲಭೂತವಾಗಿ ಒಂದೇ ಬಳಕೆಗಾಗಿ ಪ್ಲಾಸ್ಟಿಕ್‌ನಿಂದ ಮಾಡಿದ ವಸ್ತುಗಳಾಗಿವೆ. ಈ ವಸ್ತುಗಳು ಹೆಚ್ಚಾಗಿ ಪಾಲಿಥಿನ್ ಬ್ಯಾಗ್‌ಗಳು, ಸ್ಯಾಚೆಟ್‌ಗಳು, ಶಾಂಪೂ ಬಾಟಲಿಗಳು, ಬಿಸಾಡಬಹುದಾದ ಗ್ಲಾಸ್‌ಗಳು, ಇಯರ್ ಬಡ್ಸ್ ಕಡ್ಡಿ ಇತ್ಯಾದಿಗಳಾಗಿವೆ, ಇವುಗಳನ್ನು ಬಳಸಿದ ಕೂಡಲೇ ವಿಲೇವಾರಿ ಮಾಡಲಾಗುತ್ತದೆ. ಮರುಬಳಕೆ ಮಾಡುವುದಿಲ್ಲ. ಇವುಗಳಿಂದ ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಾಗಿ ಪರಿಸರದ ಮೇಲೆ ದುಷ್ಪರಿಣಾಮ ಬಿರುತ್ತದೆ

ನಿಷೇಧಿತ 19 ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳು:
ಇಯರ್ ಬಡ್ಸ್, ಬಲೂನ್‌ಗಳಿಗೆ ಅಂಟಿಸುವ ಪ್ಲಾಸ್ಟಿಕ್ ಸ್ಟಿಕ್ಸ್‌, ಪ್ಲಾಸ್ಟಿಕ್ ಬಾವುಟ, ಕ್ಯಾಂಡಿ ಸ್ಟಿಕ್ಸ್, ಐಸ್‌ಕ್ರೀಂ ಕಡ್ಡಿಗಳು, ಪಾಲಿಸ್ಟೈರೇನ್ (ಥರ್ಮೊಕೋಲ್), ಪ್ಲಾಸ್ಟಿಕ್ ತಟ್ಟೆ, ಲೋಟಗಳು, ಪ್ಲಾಸ್ಟಿಕ್ ರೂಪದ ಗಾಜುಗಳು, ಫೋರ್ಕ್‌ಗಳು, ಚಮಚಗಳು, ಸ್ಟ್ರಾಗಳು, ಟ್ರೇಗಳು, ಚಾಕುಗಳು, ಸಿಹಿತಿನಿಸುಗಳ ಡಬ್ಬಿಗಳಲ್ಲಿ ಬಳಸುವಪ್ಯಾಕೇಜಿಂಗ್ ಫಿಲಂಗಳು, ಆಹ್ವಾನಪತ್ರಿಕೆಗಳು, ಸಿಗರೇಟು ಪ್ಯಾಕೇಟ್‌ಗಳು, 100 ಮೈಕ್ರಾನ್‌ಗಿಂತ ಕಮ್ಮಿ ಇರುವ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್‌ಗಳು ಮತ್ತು ಸ್ಟಿಕರ್‌ಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.