ADVERTISEMENT

ಕಾಶ್ಮೀರದ ಪರಿಸ್ಥಿತಿ ಹದಗೆಡಲು ರಾಹುಲ್ ಬಯಸುತ್ತಾರೆಯೇ? -ಅನುರಾಗ್ ಠಾಕೂರ್

ಪಿಟಿಐ
Published 28 ಡಿಸೆಂಬರ್ 2022, 7:34 IST
Last Updated 28 ಡಿಸೆಂಬರ್ 2022, 7:34 IST
ಅನುರಾಗ್ ಠಾಕೂರ್
ಅನುರಾಗ್ ಠಾಕೂರ್   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯಲ್ಲಿ ಗಮನಾರ್ಹವಾಗಿ ಸುಧಾರಣೆ ಕಂಡಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಣಿವೆಯ ವಾತಾವರಣ ಹದಗೆಡಲು ಬಯಸುತ್ತಾರೆಯೇ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರಶ್ನಿಸಿದ್ದಾರೆ.

ಭಾರತ್ ಜೋಡೊ ಯಾತ್ರೆಯ ಭಾಗವಾಗಿ ಕಾಶ್ಮೀರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಕಾಂಗ್ರೆಸ್ ಯೋಜನೆಯನ್ನು ಅನುರಾಗ್ ಠಾಕೂರ್ ಟೀಕೆ ಮಾಡಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವರ್ಷಂಪ್ರತಿ ಅಂದಾಜು 1.6 ಕೋಟಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದು ಕೂಡ ದಾಖಲೆಯಾಗಿದೆ ಎಂದು ಸಚಿವರು ಉಲ್ಲೇಖಿಸಿದರು.

ADVERTISEMENT

ಪ್ರವಾಸಿಗರು ಈಗ ಕಾಶ್ಮೀರದ ಪ್ರತಿಯೊಂದು ಮೂಲೆಗೂ ಭೇಟಿ ನೀಡಬಹುದು. ಕಲ್ಲು ತೂರಾಟದ ಘಟನೆ ನಡೆದಿಲ್ಲ. ಹಾಗಿರುವಾಗ ಒಳ್ಳೆಯ ವಾತಾವರಣವನ್ನು ಹಾಳು ಮಾಡಲು ರಾಹುಲ್ ಭೇಟಿ ನೀಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.

ಇಂದು ಕಾಶ್ಮೀರದ ಯಾವುದೇ ಭಾಗದಲ್ಲಿ ಯಾರೂ ಬೇಕಾದರೂ ತ್ರಿವರ್ಣ ಧ್ವಜವನ್ನು ಹಾರಿಸಬಹುದು. ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದೆ ಎಂದು ಹೇಳಿದರು.

ಸೆಪ್ಟೆಂಬರ್ ತಿಂಗಳಲ್ಲಿ ಕನ್ಯಾಕುಮಾರಿಯಿಂದ ಆರಂಭವಾಗಿರುವ ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆ ಮುಂದಿನ ತಿಂಗಳು ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ.

1992ರಲ್ಲಿ ಏಕತಾ ಯಾತ್ರೆ ಕೈಗೊಂಡಿದ್ದ ಅಂದಿನ ಬಿಜೆಪಿ ಅಧ್ಯಕ್ಷ ಮುರಳಿ ಮನೋಹರ್ ಜೋಶಿ ಮತ್ತು ನರೇಂದ್ರ ಮೋದಿ ಶ್ರೀನಗರದ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದನ್ನು ಠಾಕೂರ್ ನೆನಪಿಸಿದರು.

ಅಂದಿನ ಯಾತ್ರೆಗೆ ವ್ಯಾಪಕ ಬೆಂಬಲವಿತ್ತು. ಉಗ್ರರ ದಾಳಿ, ಗುಂಡಿನ ದಾಳಿ ನಡೆದಿತ್ತು. ಕಾಂಗ್ರೆಸ್ ಸರ್ಕಾರದಿಂದಾಗಿ ಅಂತಹ ಪರಿಸ್ಥಿತಿ ಎದುರಾಗಿತ್ತು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.