ADVERTISEMENT

ಉದ್ಯಮಿಯ ‘ಹನಿಟ್ರ್ಯಾಪ್‌’ ಆರೋಪ: ಸಾಫ್ಟ್‌ವೇರ್‌ ಎಂಜಿನಿಯರ್‌ ಸೇರಿ ಮೂವರ ಬಂಧನ

ಪಿಟಿಐ
Published 11 ಜುಲೈ 2021, 13:48 IST
Last Updated 11 ಜುಲೈ 2021, 13:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಉದ್ದಿಮೆಯೊಬ್ಬರನ್ನು ‘ಹನಿಟ್ರ್ಯಾಪ್‌‘ ಮಾಡಿ, ₹ 1 ಕೋಟಿ ನೀಡದಿದ್ದರೆ ತಿದ್ದಲಾದ ಅವರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್‌ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಸಾಫ್ಟ್‌ವೇರ್‌ ಎಂಜಿನಿಯರ್‌ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾಗಿ ದೆಹಲಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಗುರುಗ್ರಾಮ ನಿವಾಸಿಯಾಗಿರುವ ಸಾಫ್ಟ್‌ವೇರ್‌ ಎಂಜಿನಿಯರ್ ರಾಜಕಿಶೋರ್‌ ಸಿಂಗ್‌, ಸಹಚರ ಆರ್ಯನ್‌ ದೀಕ್ಷಿತ್‌ ಹಾಗೂ ಮತ್ತೊಬ್ಬ ಯುವತಿಯನ್ನು ಬಂಧಿಸಲಾಗಿದ ಎಂದು ಪೊಲೀಸರು ತಿಳಿಸಿದ್ದಾರೆ.

‘ವೈಭವಯುತ ಜೀವನ ಶೈಲಿ ರೂಢಿಸಿಕೊಂಡಿದ್ದ ಆರೋಪಿ, ತನ್ನ ಖರ್ಚು–ವೆಚ್ಚಗಳಿಗಾಗಿ ಇಂಥ ಕೃತ್ಯಗಳನ್ನು ಎಸಗುತ್ತಿದ್ದ’ ಎಂದೂ ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಸ್ಪಾ ಸ್ಥಾಪಿಸಿದ್ದ ಆರೋಪಿ ರಾಜಕಿಶೋರ್‌ ಸಿಂಗ್‌, ಕೆಲಸಕ್ಕಾಗಿ ಯುವತಿಯನ್ನು ನೇಮಕ ಮಾಡಿಕೊಂಡಿದ್ದ. ‘ಟಿಂಡರ್‌’ ಎಂಬ ಆ್ಯಪ್‌ ಮೂಲಕ ಶ್ರೀಮಂತರು, ಉದ್ಯಮಿಗಳನ್ನು ಸಂಪರ್ಕಿಸುತ್ತಿದ್ದರು. ಮತ್ತೊಬ್ಬ ಆರೋಪಿ ಮಹಿಳೆ ಅವರೊಂದಿಗೆ ಚಾಟ್‌ ಮಾಡಿ, ಸ್ಪಾನಲ್ಲಿನ ಯುವತಿಯರೊಂದಿಗೆ ನಿಕಟವಾಗಿರುವಂತೆ ಪುಸಲಾಯಿಸುತ್ತಿದ್ದರು. ನಂತರ, ಅವರ ಏಕಾಂತದ ಕ್ಷಣಗಳ ಫೋಟೊ, ವಿಡಿಯೊ ಸೆರೆಹಿಡಿದು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಹಣ ನೀಡಲು ಒಪ್ಪದಿದ್ದಾಗ, ಈ ಫೋಟೊ, ವಿಡಿಯೊಗಳನ್ನು ಅಪ್‌ಲೋಡ್‌ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

‘ಉದ್ಯಮಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಮೂವರನ್ನು ಬಂಧಿಸಲಾಗಿದೆ. ರಹಸ್ಯವಾಗಿ ಚಿತ್ರೀಕರಣಕ್ಕೆ ಬಳಸುತ್ತಿದ್ದ ಕ್ಯಾಮೆರಾಗಳಿದ್ದ ಎರಡು ಬ್ಯಾಗ್‌, ಮೆಮೊರಿ ಕಾರ್ಡ್‌, ಯುಎಸ್‌ಪಿ ಪೆನ್ ಡ್ರೈವ್‌, ಲ್ಯಾಪ್‌ಟಾಪ್‌ ಹಾಗೂ ಮೊಬೈಲ್‌ಫೋನನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಕ್ರೈಂ ಬ್ರ್ಯಾಂಚ್‌ನ ಡಿಸಿಪಿ ಮನೋಜ್‌ ಸಿ. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.