ADVERTISEMENT

ಕೋವಿಡ್‌ನಿಂದಾಗಿ ಸಾವು: ಡಬ್ಲ್ಯುಎಚ್‌ಒ ವರದಿಗೆ ‘ಆರೋಗ್ಯ ಸಮಾವೇಶ’ದಲ್ಲಿ ಆಕ್ಷೇಪ

ಪಿಟಿಐ
Published 6 ಮೇ 2022, 11:07 IST
Last Updated 6 ಮೇ 2022, 11:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೇವಡಿಯಾ, ಗುಜರಾತ್‌: ಕೋವಿಡ್‌ನಿಂದಾಗಿ ಭಾರತದಲ್ಲಿ 2020–21ರಲ್ಲಿ 47 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ವರದಿ ಬಗ್ಗೆ ಇಲ್ಲಿ ನಡೆಯುತ್ತಿರುವ ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರೀಯ ಮಂಡಳಿ’ಯ (ಸಿಸಿಎಚ್‌ಎಫ್‌ಡಬ್ಲ್ಯು) 14ನೇ ಸಮಾವೇಶದಲ್ಲಿ ಭಾರಿ ಆಕ್ಷೇಪ ವ್ಯಕ್ತವಾಯಿತು.

‘ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದ ಪ್ರಮುಖರು ವಿಶ್ವ ಆರೋಗ್ಯ ಸಂಸ್ಥೆಯ ಈ ವರದಿ ಆಧಾರ ರಹಿತ. ವಾಸ್ತವಾಂಶಗಳಿಂದ ಕೂಡಿಲ್ಲ ಎಂಬುದಾಗಿ ಟೀಕಿಸಿದರು’ ಎಂದು ಮೂಲಗಳು ಹೇಳಿವೆ.

ಆರೋಗ್ಯ ಸಚಿವಾಲಯದಡಿ ಸಲಹಾ ಸಮಿತಿಯಾಗಿರುವ ಸಿಸಿಎಚ್‌ಎಫ್‌ಡಬ್ಲ್ಯುನ ಮೂರು ದಿನಗಳ ಸಮಾವೇಶ ಗುರುವಾರ ಆರಂಭವಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯಾ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ವಿವಿಧ ರಾಜ್ಯಗಳ ಆರೋಗ್ಯ ಸಚಿವರು ಹಾಗೂ ತಜ್ಞರು ಸೇರಿ 20 ಜನ ಪ್ರತಿನಿಧಿಗಳು ಮಾತನಾಡಿದ್ದಾರೆ.

ADVERTISEMENT

ಕೋವಿಡ್‌ನಿಂದಾಗಿ ವಿಶ್ವದಲ್ಲಿ ಮೃತಪಟ್ಟವರ ಕುರಿತ ವರದಿಯನ್ನು ಡಬ್ಲ್ಯುಎಚ್‌ಒ ಗುರುವಾರ ಬಿಡುಗಡೆ ಮಾಡಿದೆ. ಈ ವರದಿಗೆ ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು.

ಕಾಂಗ್ರೆಸ್‌ನಿಂದ ವಾಗ್ದಾಳಿ: ಕೋವಿಡ್‌ನಿಂದಾಗಿ 2020–21ನೇ ಸಾಲಿನಲ್ಲಿ ಭಾರತದಲ್ಲಿ ಸಂಭವಿಸಿರುವ ಸಾವುಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದೆ.

‘ಕೋವಿಡ್‌ನಿಂದಾಗಿ ದೇಶದಲ್ಲಿ ಸಂಭವಿಸಿರುವ ಸಾವುಗಳ ನಿಖರ ಮಾಹಿತಿ ಕಲೆ ಹಾಕಲು ಎಲ್ಲ ಪಕ್ಷಗಳ ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಬೇಕು’ ಎಂದು ಕಾಂಗ್ರೆಸ್‌ನ ಹಲವು ಮುಖಂಡರು ಆಗ್ರಹಿಸಿದ್ದಾರೆ.

‘ಸಂತ್ರಸ್ತರ ಕುಟುಂಬಗಳಿಗೆ ₹ 4 ಲಕ್ಷ ಪರಿಹಾರ ನೀಡಬೇಕು’ ಎಂದೂ ಒತ್ತಾಯಿಸಿದ್ದಾರೆ.

‘ಕೋವಿಡ್‌ನಿಂದಾಗಿ 47 ಲಕ್ಷ ಭಾರತೀಯರು ಮೃತಪಟ್ಟಿದ್ದಾರೆ. ಕೇಂದ್ರ ಸರ್ಕಾರ ಹೇಳಿರುವಂತೆ 4.8 ಲಕ್ಷ ಮಂದಿಯಲ್ಲ. ಮೋದಿ ಸುಳ್ಳು ಹೇಳಬಹುದು, ವಿಜ್ಞಾನ ಸುಳ್ಳು ಹೇಳುವುದಿಲ್ಲ’ ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.