ಚೆನ್ನೈ/ನವದೆಹಲಿ (ಪಿಟಿಐ): ಮೇ 24ರಂದು ನಡೆಯುವ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶುಕ್ರವಾರ ಕಾಂಗ್ರೆಸ್‌ನ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ದೆಹಲಿಗೆ ಬಂದಿಳಿದ ಸ್ಟಾಲಿನ್ ಅವರನ್ನು ಡಿಎಂಕೆಯ ಹಿರಿಯ ನಾಯಕ ಟಿ.ಆರ್.ಬಾಲು ನೇತೃತ್ವದಲ್ಲಿ ನಾಯಕರು ಬರಮಾಡಿಕೊಂಡರು. ಈ ಹಿಂದೆ ಕೊನೆಯದಾಗಿ 2021ರಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಸ್ಟಾಲಿನ್ ಭಾಗವಹಿಸಿದ್ದರು.
‘ಸೋನಿಯಾ ಗಾಂಧಿ ಹಾಗೂ ಸಹೋದರ ರಾಹುಲ್ ಗಾಂಧಿ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿಯಾಗುವ ಪ್ರತಿ ಸಭೆಯಲ್ಲಿ ವಿಶೇಷತೆ ಇರುತ್ತದೆ. ನಿಜಕ್ಕೂ ಕುಟುಂಬದ ಸದಸ್ಯರನ್ನು ಭೇಟಿಯಾದಂತೆ ಭಾಸವಾಯಿತು’ ಎಂದು ಎಂ.ಕೆ.ಸ್ಟಾಲಿನ್ ಅವರು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
‘ನನ್ನ ಸಿದ್ಧಾಂತಕ್ಕೆ ನಾನು ಬದ್ಧನಾಗಿದ್ದೇನೆ. ನಿರಂತರ ಹೋರಾಟದ ಮೂಲಕ ತಮಿಳುನಾಡಿಗೆ ಬರಬೇಕಿರುವ ಅನುದಾನ ಪಡೆಯುತ್ತೇನೆ. ಕೇಂದ್ರದ ಅನುದಾನ ಪಡೆಯುವುದು ರಾಜ್ಯದ ಹಕ್ಕಾಗಿದ್ದು, ಈ ಕುರಿತು ಸಭೆಯಲ್ಲಿ ಧ್ವನಿಯೆತ್ತುತ್ತೇನೆ’ ಎಂದು ಸ್ಟಾಲಿನ್ ಅವರು ಭೇಟಿಗೂ ಮುನ್ನ ತಿಳಿಸಿದ್ದರು.
ನಾಲ್ಕು ವರ್ಷಗಳ ಬಳಿಕ ನೀತಿ ಆಯೋಗದ ಸಭೆಗೆ ಸ್ಟಾಲಿನ್ ಹಾಜರಾಗುತ್ತಿರುವ ಕುರಿತು ಎಐಎಡಿಎಂಕೆ ಪಕ್ಷ ಟೀಕಿಸಿದೆ.
‘ಕೇವಲ ಕುಟುಂಬದ ಹಿತ ಕಾಪಾಡುವುದಕ್ಕಾಗಿಯೇ ಸ್ಟಾಲಿನ್ ಅವರು ದೆಹಲಿ ಪ್ರವಾಸ ಕೈಗೊಂಡಿದ್ದಾರೆ’ ಎಂದು ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.