ಲೈಂಗಿಕ ಕಿರುಕುಳ (ಪ್ರಾತಿನಿಧಿಕ ಚಿತ್ರ)
ಥಾಣೆ: ಮಹಾರಾಷ್ಟ್ರದ ಠಾಣೆಯಲ್ಲಿ 14 ವರ್ಷದ ಬಾಲಕಿಯನ್ನು ಹಿಂಬಾಲಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿದ 24 ಗಂಟೆಗಳೊಳಗೆ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಬುಧವಾರ ಹೇಳಿದ್ದಾರೆ. ಘಟನೆಯು ಜೂನ್ 29ರಂದು ವರ್ತಕ್ ನಗರ ಪ್ರದೇಶದಲ್ಲಿ ಸಂಭವಿಸಿತ್ತು.
ಕಿಸಾನ್ ನಗರದ ನಿವಾಸಿ ದಿನೇಶ್ ವಿವೇಕ್ ಘಾಗ್ (26) ಆರೋಪಿ. ಕಲ್ಯಾಣ್ ಬಳಿ ತಪ್ಪಿಸಿಕೊಳ್ಳುವಾಗ ಆತನನ್ನು ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ವಾಘಚೌರೆ ಹೇಳಿದ್ದಾರೆ. ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 78 (1), 78 (2) (ಹಿಂಬಾಲಿಸುವುದು) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಾಲಕಿಯು ತನ್ನ ತರಗತಿ ಮುಗಿಸಿ ಮನೆಗೆ ಹೋಗುತ್ತಿರುವ ವೇಳೆ ವರ್ತಕ್ ನಗರದಲ್ಲಿ ಅಪರಿಚಿತ ವ್ಯಕ್ತಿ ಕೆಂಪು ಕಾರಿನಲ್ಲಿ ಸುಮಾರು 500 ಮೀಟರ್ ಹಿಂಬಾಲಿಸಿದ್ದಾಗಿ ಸಂತ್ರಸ್ತೆಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಕಾರಿನಲ್ಲಿ ಕುಳಿತುಕೊಳ್ಳುವಂತೆ ಆರೋಪಿಯು ಬಾಲಕಿಯನ್ನು ಒತ್ಳಾಯಿಸಿದ್ದು, ಆದರೆ ಬಾಲಕಿ ನಿರಾಕರಿಸಿ ಅಲ್ಲಿಂದ ತಪ್ಪಿಸಿಕೊಂಡಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಂತರ ಪ್ರದೇಶದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ವೇಳೆ ಪೊಲೀಸರು ಕಾರು ಮತ್ತು ಅದರ ನೋಂದಣಿ ಸಂಖ್ಯೆಯನ್ನು ಗುರುತಿಸಿದ್ದು, ಆರೋಪಿ ಕಲ್ಯಾಣ್ ಪ್ರದೇಶದಲ್ಲಿ ಇರುವುದನ್ನು ಪತ್ತೆಹಚ್ಚಿದ್ದರು. ತಕ್ಷಣವೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬಾರ್ ಒಂದರಲ್ಲಿ ಆತನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ತನಿಖೆಯನ್ನು 24 ಗಂಟೆಗಳೊಳಗೆ ಪೂರ್ಣಗೊಳಿಸಿ, ಪ್ರಬಲ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.