ADVERTISEMENT

Online ಬೆಟ್ಟಿಂಗ್: ಕ್ರಮಕ್ಕೆ ಒತ್ತಾಯ- ಲೋಕಸಭೆ ಕಲಾಪದ ಶೂನ್ಯ ವೇಳೆಯಲ್ಲಿ ಆಕ್ರೋಶ

ವಿಷಯ ಪ್ರಸ್ತಾಪಿಸಿದ ಸಂಸದರು

ಪಿಟಿಐ
Published 26 ಮಾರ್ಚ್ 2025, 15:38 IST
Last Updated 26 ಮಾರ್ಚ್ 2025, 15:38 IST
ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್   

ನವದೆಹಲಿ: ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ನಿಯಂತ್ರಣಕ್ಕೆ ರಾಜ್ಯಗಳೇ ಕಾನೂನು ರೂಪಿಸಿಕೊಳ್ಳಲಿ ಎಂದು ಲೋಕಸಭೆಯ ಬುಧವಾರದ ಕಲಾಪದಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ. 

ಸರ್ಕಾರದ ನಿಯಂತ್ರಣಗಳನ್ನು ತಪ್ಪಿಸಿಕೊಂಡು ನಾಯಿಕೊಡೆಗಳಂತೆ ವ್ಯಾಪಕವಾಗುತ್ತಿರುವ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಿನ ಮೊಬೈಲ್ ಅಪ್ಲಿಕೇಷನ್‌ಗಳನ್ನು ಸಂಪೂರ್ಣವಾಗಿ ತೊಡೆದುಹಾಕಬೇಕು ಎಂಬ ಪ್ರಬಲ ಬೇಡಿಕೆ ವ್ಯಕ್ತವಾದ ಕಾರಣ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಮೇಲಿನಂತೆ ಉತ್ತರಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಡಿಎಂಕೆ ಸಂಸದ ದಯಾನಿಧಿ ಮಾರನ್, ‘ಆನ್‌ಲೈನ್ ಗೇಮಿಂಗ್ ವಿರುದ್ಧ ಕ್ರಮ ಕೈಗೊಳ್ಳುವ ನೈತಿಕ ಜವಾಬ್ದಾರಿ ನಿರ್ವಹಿಸಲು ಕೇಂದ್ರ ಸರ್ಕಾರಕ್ಕೆ ಸಂಕೋಚವೇಕೆ? ತಮಿಳುನಾಡು ಸರ್ಕಾರವು ಆನ್‌ಲೈನ್ ಗೇಮಿಂಗ್ ಸೈಟ್‌ಗಳನ್ನು ನಿಷೇಧಿಸಿದೆ. ಎಲ್ಲ ಆನ್‌ಲೈನ್ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಲು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಇನ್ನೆಷ್ಟು ಸಮಯ ಬೇಕು’ ಎಂದು ಪ್ರಶ್ನಿಸಿದರು. 

ADVERTISEMENT

ಸಚಿವ ವೈಷ್ಣವ್ ಉತ್ತರ: ‘ಕೇಂದ್ರ ಸರ್ಕಾರದ ನೈತಿಕ ಅಧಿಕಾರ ಪ್ರಶ್ನಿಸಲು ಮಾರನ್ ಅವರಿಗೆ ಯಾವುದೇ ಅಧಿಕಾರ ಇಲ್ಲ. ಸಂವಿಧಾನದಲ್ಲಿ ಗೊತ್ತುಮಾಡಿದ ಒಕ್ಕೂಟ ವ್ಯವಸ್ಥೆಯ ರಚನೆಯಂತೆ ದೇಶ ಕಾರ್ಯ ನಿರ್ವಹಿಸುತ್ತದೆ. ದಯಮಾಡಿ, ಒಕ್ಕೂಟ ವ್ಯವಸ್ಥೆಯ ರಚನೆ ಓದಿ. ದೇಶದ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸಿ, ಸಂವಿಧಾನ ಉಳಿಸಬೇಕು ಎಂದು ಸಂಸದರಿಗೆ ಮನವಿ ಮಾಡುತ್ತೇನೆ. ರಾಜ್ಯಪಟ್ಟಿಗೆ ಬರುವ ವಿಷಯಗಳ ಮೇಲೆ ಕಾನೂನು ರೂಪಿಸುವ ನೈತಿಕತೆ ಮತ್ತು ಕಾನೂನು ಅಧಿಕಾರವನ್ನು ಸಂವಿಧಾನವು ರಾಜ್ಯಗಳಿಗೆ ವಹಿಸಿದೆ’ ಎಂದು ಸಚಿವ ವೈಷ್ಣವ್ ತಿರುಗೇಟು ನೀಡಿದರು.

***

ಬೆಟ್ಟಿಂಗ್ ಮತ್ತು ಜೂಜಿಗೆ ಸಂಬಂಧಿಸಿದ ಅಪ್ಲಿಕೇಷನ್‌ಗಳ ವಿರುದ್ಧ ಕ್ರಮಕ್ಕೆ ಸೈಬರ್ ಅಪರಾಧ ಇಲಾಖೆಯಡಿ ಕಾರ್ಯಪಡೆ ರಚಿಸಬೇಕು. ಪ್ರಭಾವಿ ವ್ಯಕ್ತಿಗಳು ಮತ್ತು ಸೆಲಿಬ್ರಿಟಿಗಳು ಬೆಂಬಲಿಸುವ ಇಂಥ ಅಪ್ಲಿಕೇಷನ್‌ಗಳ ನಿಯಂತ್ರಣಕ್ಕೆ ಕರಡು ರೂಪಿಸಬೇಕು

-ಮದ್ದಿಲ ಗುರುಮೂರ್ತಿ, ವೈಎಸ್ಆರ್ ಕಾಂಗ್ರೆಸ್ ಸಂಸದ

ದೂರುಗಳನ್ನು ಆಧರಿಸಿ ಈಗಾಗಲೇ 1,410ಕ್ಕೂ ಹೆಚ್ಚು ಗೇಮಿಂಗ್ ವೆಬ್‌ಸೈಟ್‌ಗಳನ್ನು ನಿಷೇಧಿಸಲಾಗಿದೆ. ಈ ಸಂಬಂಧ ದೂರು ದಾಖಲಾದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 112ರ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದರು. 

-ಅಶ್ವಿನಿ ವೈಷ್ಣವ್, ಮಾಹಿತಿ ತಂತ್ರಜ್ಞಾನ ಸಚಿವ

‘ಡಿಐಸಿಜಿಸಿ ಕಾಯ್ದೆ ತಿದ್ದುಪಡಿಯಾಗಲಿ’

ಬ್ಯಾಂಕ್‌ಗಳು ಹಣಕಾಸು ಸಮಸ್ಯೆಗೆ ಸಿಲುಕಿದ ಸಂದರ್ಭದಲ್ಲಿ ₹5 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಠೇವಣಿ ಇಟ್ಟ ಮೊತ್ತವನ್ನೂ ಒಳಗೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಡೆಪಾಸಿಟ್ ಇನ್ಶೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಪ್ರತಿನಿಧಿಸುವ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.  ಲೋಕಸಭೆಯ ಬುಧವಾರ ಕಲಾಪದಲ್ಲಿ ಈ ವಿಚಾರ ಪ್ರಸ್ತಾಪಿಸಿದ ಅವರು ಡಿಐಸಿಜಿಸಿ ಕಾಯ್ದೆ ಪ್ರಕಾರ ಬೆಂಗಳೂರಿನಲ್ಲಿರುವ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ₹5 ಲಕ್ಷದವರೆಗೆ ಠೇವಣಿ ಇಟ್ಟ ಶೇ 78ರಷ್ಟು ಮಂದಿಗೆ ವಿಮೆ ಮೊತ್ತ ಲಭ್ಯವಾಯಿತು. ಆದರೆ ಶೇ 22ರಷ್ಟು ಮಂದಿ ₹5 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಹಣ ಠೇವಣಿ ಇಟ್ಟಿದ್ದರು. ಅವರಿಗೆ ಇನ್ನೂ ಪರಿಹಾರ ಸಿಗಬೇಕಿದೆ ಎಂದು ಹೇಳಿದರು. ಹಿರಿಯ ನಾಗರಿಕರು ಮಾಡುವ ಬ್ಯಾಂಕ್ ಠೇವಣಿಗೆ ಶೇ 100ರಷ್ಟು ವಿಮೆ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದರು.  ಹಿರಿಯ ನಾಗರಿಕರು ಠೇವಣಿ ಮಾಡುವ ಸಂಪೂರ್ಣ ಹಣದ ರಕ್ಷಣೆಗಾಗಿ ಡಿಐಸಿಜಿಸಿ ಕಾಯ್ದೆಯನ್ನು ಎಲ್ಲ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್‌ಗಳಿಗೆ ವಿಸ್ತರಿಸಬೇಕು. ಜೊತೆಗೆ  ಠೇವಣಿದಾರರ ರಕ್ಷಣೆಗಾಗಿ ಎನ್‌ಬಿಎಫ್‌ಸಿಗಳನ್ನು ಡಿಐಸಿಜಿಸಿ ಕಾಯ್ದೆ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದರು. 

ತೆಲಂಗಾಣ: ಆನ್‌ಲೈನ್‌ ಬೆಟ್ಟಿಂಗ್ ವಿರುದ್ಧ ಎಸ್‌ಐಟಿ ರಚನೆ

ಹೈದರಾಬಾದ್‌: ಆನ್‌ಲೈನ್‌ ಬೆಟ್ಟಿಂಗ್‌ ಮತ್ತು ರಮ್ಮಿ ಆ್ಯಪ್‌ಗಳ ಬಗ್ಗೆ ತನಿಖೆಗಾಗಿ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಲು ತೆಲಂಗಾಣ ಸರ್ಕಾರ ಮುಂದಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರು ವಿಧಾನಸಭೆಯಲ್ಲಿ ಬುಧವಾರ ಮಾಹಿತಿ ನೀಡಿದರು. ಬೆಟ್ಟಿಂಗ್‌ ಆ್ಯಪ್ ಪರ ಪ್ರಚಾರ ಮಾಡುವ ಸಾಮಾಜಿಕ ಮಾಧ್ಯಮ ಇನ್‌ಫ್ಲ್ಯುಯೆನ್ಸರ್‌ ಮತ್ತು ಚಿತ್ರತಾರೆಯರ ವಿರುದ್ಧ ಹೈದರಾಬಾದ್‌ನಲ್ಲಿ ದೂರು ದಾಖಲಾಗಿರುವ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.