ADVERTISEMENT

ಗಣಿಗಾರಿಕೆಗೆ ತೆರಿಗೆ | ರಾಜ್ಯಗಳು ಅಧಿಕಾರ ಹೊಂದಿವೆ: ಸುಪ್ರೀಂ ಕೋರ್ಟ್‌

9 ಸದಸ್ಯರಿದ್ದ ಸುಪ್ರೀಂ ಕೋರ್ಟ್‌ ಸಂವಿಧಾನ ಪೀಠ ತೀರ್ಪು

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 23:51 IST
Last Updated 25 ಜುಲೈ 2024, 23:51 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಗಣಿಗಾರಿಕೆ ಹಾಗೂ ಖನಿಜಗಳಿರುವ ಜಮೀನುಗಳ ಮೇಲೆ ತೆರಿಗೆ ವಿಧಿಸಲು ರಾಜ್ಯಗಳು ಶಾಸನಬದ್ಧ ಅಧಿಕಾರ ಹೊಂದಿವೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ತೆರಿಗೆ ಮತ್ತು ರಾಯಧನ ಬೇರೆಬೇರೆ ಎಂದೂ ಪೀಠ ಸ್ಪಷ್ಟಪಡಿಸಿದೆ. 9 ನ್ಯಾಯಮೂರ್ತಿಗಳು ಇರುವ ಸಂವಿಧಾನ ಪೀಠವು, 8:1 ರಂತೆ ಬಹುಮತದ ತೀರ್ಪು ನೀಡಿದೆ.  

ಖನಿಜಗಳಿರುವ ಜಮೀನುಗಳಿಂದ ಸಿಗುವ ಆದಾಯಕ್ಕೆ ಸಂಬಂಧಿಸಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಘರ್ಷಕ್ಕೆ ಈ ತೀರ್ಪು ಅಂತ್ಯ ಹಾಡುವ ಸಾಧ್ಯತೆ ಇದೆ.

ADVERTISEMENT

ಇನ್ನೊಂದೆಡೆ, ಸುಪ್ರೀಂ ಕೋರ್ಟ್‌ನ ಈ ತೀರ್ಪು, ಕೇಂದ್ರ ಸರ್ಕಾರಕ್ಕೆ ಆದ ಹಿನ್ನಡೆಯಾಗಿದೆ. ಹೇರಳ ಖನಿಜ ಸಂಪತ್ತು ಹೊಂದಿರುವ ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ, ಜಾರ್ಖಂಡ್‌, ಪಶ್ಚಿಮ ಬಂಗಾಳ, ಛತ್ತೀಸಗಢ, ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಿಗೆ ಈ ತೀರ್ಪು ವರದಾನವಾಗಲಿದೆ  ಎಂದೇ ವಿಶ್ಲೇಷಿಸಲಾಗುತ್ತಿದೆ. 

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಸಂವಿಧಾನ ಪೀಠ, ಈ ಕುರಿತ ಅರ್ಜಿ ವಿಚಾರಣೆ ನಡೆಸಿತು. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಭಿನ್ನ ನಿಲುವು ವ್ಯಕ್ತಪಡಿಸಿದ್ದಾರೆ.

ನ್ಯಾಯಮೂರ್ತಿಗಳಾದ ಹೃಷಿಕೇಶ್‌ ರಾಯ್, ಅಭಯ್‌ ಎಸ್.ಓಕಾ, ಜೆ.ಬಿ.ಪಾರ್ದೀವಾಲಾ, ಮನೋಜ್‌ ಮಿಶ್ರಾ, ಉಜ್ಜಲ್‌ ಭುಯಾನ್, ಸತೀಶ್ಚಂದ್ರ ಶರ್ಮ ಹಾಗೂ ಆಗಸ್ಟಿನ್ ಜಾರ್ಜ್ ಮಸೀಹ್ ಅವರೂ ಪೀಠದಲ್ಲಿದ್ದರು.

ತೀರ್ಪಿನಲ್ಲಿ ಏನಿದೆ: ತಮ್ಮ ಹಾಗೂ ಇತರ ಏಳು ಜನ ನ್ಯಾಯಮೂರ್ತಿಗಳ ಪರವಾಗಿ ತೀರ್ಪನ್ನು ಓದಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್‌, ‘ಗಣಿಗಾರಿಕೆ ಮತ್ತು ಖನಿಜಗಳಿರುವ ಜಮೀನುಗಳ ಮೇಲೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಅಧಿಕಾರ ಇದೆ. ಗಣಿಗಾರಿಕೆ ನಡೆಸಲು ಪರವಾನಗಿ ಪಡೆದವರು ಕೇಂದ್ರ ಸರ್ಕಾರಕ್ಕೆ ಪಾವತಿಸುವ ರಾಯಧನವು ತೆರಿಗೆಯಲ್ಲ’ ಎಂದು ಹೇಳಿದರು.

‘ಗಣಿಗಳು ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957, ತೆರಿಗೆ ವಿಧಿಸುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಮೊಟಕುಗೊಳಿಸುವುದಿಲ್ಲ’ ಎಂದೂ ಸ್ಪಷ್ಟಪಡಿಸಿದರು.

‘ಗಣಿಗಾರಿಕೆ ನಡೆಸಲು ಗುತ್ತಿಗೆ ನೀಡಿದ ಸಂದರ್ಭದಲ್ಲಿ ಮಾಡಿಕೊಂಡ ಒಪ್ಪಂದಗಳಿಂದಾಗಿ ರಾಯಧನ ಪಾವತಿಸುವ ಸಂದರ್ಭ ಉದ್ಭವಿಸುತ್ತದೆ. ಗಣಿಗಾರಿಕೆಗೆ ಗುತ್ತಿಗೆ ಪಡೆದವರಿಂದ ಬಾಕಿ ರೂಪದಲ್ಲಿ ಸರ್ಕಾರ ಪಡೆಯುವ ಇಂತಹ ಪಾವತಿಗಳನ್ನು ತೆರಿಗೆ ಎಂಬುದಾಗಿ ಭಾವಿಸವಂತಿಲ್ಲ’ ಎಂದೂ ಸಿಜೆಐ ಹೇಳಿದರು.

ತಾವು ನೀಡಿದ ಭಿನ್ನ ತೀರ್ಪನ್ನು ಓದಿದ ನ್ಯಾಯಮೂರ್ತಿ ನಾಗರತ್ನ, ‘ರಾಯಧನ ಕೂಡ ತೆರಿಗೆಯೇ ಆಗಿದೆ’ ಎಂದರು.

‘ರಾಜ್ಯಗಳಿಗೆ ತೆರಿಗೆ ವಿಧಿಸುವ ಅಧಿಕಾರ ನೀಡಿದರೆ, ಒಕ್ಕೂಟ ವ್ಯವಸ್ಥೆ ಛಿದ್ರವಾಗುವುದಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಗಣಿಗಾರಿಕೆ ಕುಂಠಿತಗೊಳ್ಳುವಂತೆಯೂ ಮಾಡುತ್ತದೆ. ಖನಿಜ ಸಂಪತ್ತು ಹೊಂದಿರುವ ರಾಜ್ಯಗಳಲ್ಲಿ ಗಣಿಗಾರಿಕೆ ಗುತ್ತಿಗೆ ಪಡೆಯಲು ಅನಾರೋಗ್ಯಕರ ಪೈಪೋಟಿಗೂ ಇದು ದಾರಿ ಮಾಡಿ ಕೊಡುತ್ತದೆ’ ಎಂದು ನ್ಯಾಯಮೂರ್ತಿ ನಾಗರತ್ನ ತಮ್ಮ ತೀರ್ಪಿನಲ್ಲಿ ಹೇಳಿದರು.

ವಿವಿಧ ರಾಜ್ಯಗಳು, ಗಣಿಗಾರಿಕೆ ನಡೆಸುವ ಕಂಪನಿಗಳು ಹಾಗೂ ಸಾರ್ವಜನಿಕ ವಲಯದ ಉದ್ದಿಮೆಗಳಿಂದ 80ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು.

ಅನ್ವಯಿಸುವಿಕೆ: ಪರಿಶೀಲನೆಗೆ ಸಿಜೆಐ ಒಪ್ಪಿಗೆ

ಗಣಿಗಾರಿಕೆ ಮತ್ತು ಖನಿಜಗಳಿರುವ ಜಮೀನುಗಳಿಗೆ ರಾಜ್ಯ ಸರ್ಕಾರಗಳು ತೆರಿಗೆ ವಿಧಿಸುವ ಅಧಿಕಾರ ಹೊಂದಿವೆ ಎಂಬ ತನ್ನ ತೀರ್ಪನ್ನು ಯಾವ ರೀತಿ ಅನ್ವಯಿಸಬಹುದು ಎಂಬುದರ ಕುರಿತು ಪರಿಶೀಲನೆ ನಡೆಸಲು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಒಪ್ಪಿಗೆ ಸೂಚಿಸಿದರು. ‘ಈ ತೀರ್ಪು ಪೂರ್ವಾನ್ವಯವಾದಲ್ಲಿ ಗಣಿಗಾರಿಕೆಗೆ ಗುತ್ತಿಗೆ ಪಡೆದವರಿಂದ ರಾಜ್ಯಗಳು ಕೋಟ್ಯಂತರ ರೂಪಾಯಿ ವಸೂಲಿ ಮಾಡುತ್ತವೆ. ಇದರಿಂದ ಗಣಿಗಾರಿಕೆ ನಡೆಸುವವರ ಮೇಲೆ ಭಾರಿ ಪ್ರಮಾಣ ಹಣಕಾಸಿನ ಹೊರೆ ಬೀಳಲಿದೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.