ADVERTISEMENT

ಬಿಜು ಪ್ರತಿಮೆಗೆ ಬೆಂಕಿ: ಬಿಜೆಡಿ ಕಿಡಿ

ಕಿಡಿಗೇಡಿಯ ಬಂಧನ: ಮುಖ್ಯಮಂತ್ರಿ ಮಾಝಿ

ಪಿಟಿಐ
Published 15 ಏಪ್ರಿಲ್ 2025, 16:36 IST
Last Updated 15 ಏಪ್ರಿಲ್ 2025, 16:36 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಭುವನೇಶ್ವರ: ಒಡಿಶಾದ ಬಲಾಂಗೀರ್‌ ಜಿಲ್ಲೆಯ ಪಟ್ನಾಗಢದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್‌ ಅವರ ಪ್ರತಿಮೆಗೆ ದುಷ್ಕರ್ಮಿಗಳು ಮಂಗಳವಾರ ಬೆಂಕಿ ಹಚ್ಚಿದ್ದಾರೆ.

ಕಿಡಿಗೇಡಿಗಳ ದುಷ್ಕೃತ್ಯವನ್ನು ಮುಖ್ಯಮಂತ್ರಿ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರು ಖಂಡಿಸಿದ್ದಾರೆ.

ADVERTISEMENT

ಪ್ರತಿಮೆಗೆ ಬೆಂಕಿ ಹಚ್ಚಿದ್ದನ್ನು ಖಂಡಿಸಿ ಬಿಜು ಜನತಾದಳದ ಮುಖಂಡರು, ಭುವನೇಶ್ವರದ ವಿಮಾನ ನಿಲ್ದಾಣದ‌ಲ್ಲಿರುವ ಬಿಜು ಪ್ರತಿಮೆ ಬಳಿ ಪ್ರತಿಭಟಿಸಿದರು. ಆಡಳಿತಾರೂಢ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪಟ್ನಾಯಕ್‌ ಅವರ ಪ್ರತಿಮೆಗಳಿಗೆ ಹಾನಿಯಾಗುತ್ತಿದೆ ಎಂದು ಕಿಡಿಕಾರಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಮೋಹನ್‌ ಚರಣ್‌ ಮಾಝಿ ಹೇಳಿದ್ದಾರೆ.

‘ಹೀನರು, ಮಾನಸಿಕ ಅಸ್ವಸ್ಥರ ಕೆಲಸವಿದು. ದುಷ್ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಇದರ ಹಿಂದಿರುವ ಪಿತೂರಿಯನ್ನು ಬಹಿರಂಗಪಡಿಸಿ’ ಎಂದು ಮುಖ್ಯಮಂತ್ರಿ ಪೊಲೀಸರಿಗೆ ನಿರ್ದೇಶಿಸಿದ್ದಾರೆ.

ಪಟ್ನಾಗಢದ ಮಾಜಿ ಶಾಸಕ ಸರೋಜ್‌ ಕುಮಾರ್‌ ಮೆಹೆರ್‌ ಅವರು ಬಿಜು ಪಟ್ನಾಯಕ್‌ ಅವರ ಪ್ರತಿಮೆ ಪ್ರತಿಷ್ಠಾಪಿಸಿದ್ದರು. ಆದರೆ ಇದಕ್ಕೆ ಕೆಲವರು ವಿರೋಧಿಸಿದ್ದು, ಪರಶುರಾಮನ ಪ್ರತಿಮೆ ಸ್ಥಾಪನೆಗೆ ಆಗ್ರಹಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬ್ರಾಹ್ಮಣ ಸಮಾಜದ ಸದಸ್ಯರು ತಿಂಗಳ ಹಿಂದಷ್ಟೇ ಪ್ರತಿಭಟನೆ ನಡೆಸಿದ್ದರು. ಈ ವಿಷಯವು ಹೈಕೋರ್ಟ್‌ನಲ್ಲಿದೆ. ಬಿಜು ಪಟ್ನಾಯಕ್‌ ಮತ್ತು ಪರಶುರಾಮರ ಪ್ರತಿಮೆಗಳನ್ನು ಒಂದೇ ವೃತ್ತದಲ್ಲಿ ಪ್ರತಿಷ್ಠಾಪಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.