ADVERTISEMENT

ಆಧಾರ್‌ ತೀರ್ಪು: ಹೋರಾಟದ ಹಾದಿಯ ಅವಲೋಕನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2018, 9:27 IST
Last Updated 26 ಸೆಪ್ಟೆಂಬರ್ 2018, 9:27 IST
   

ಬೆಂಗಳೂರು: ವಿವಾದಾತ್ಮಕ ಆಧಾರ್ ಯೋಜನೆ ಕುರಿತ ಹಲವು ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಬುಧವಾರ ಅಂತಿಮ ತೀರ್ಪು ಪ್ರಕಟಿಸಿತು.ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಈಚೆಗಷ್ಟೇ ಈ ನ್ಯಾಯಪೀಠದ ನೇತೃತ್ವ ವಹಿಸಿಕೊಂಡಿದ್ದರು.

ಜನಸಾಮಾನ್ಯರಿಗೆ ಪಡಿತರ ವಿತರಣೆಯನ್ನು ಪರಿಣಾಮಕಾರಿಯಾಗಿ ತಲುಪಿಸಲು ನೆರವಾಗುವ ಸಾಧನ ಎನಿಸಿದ್ದ ‘ಆಧಾರ್‌’, ಕ್ರಮೇಣ ರಾಷ್ಟ್ರೀಯ ಗುರುತಿನ ಸಂಕೇತವೇ ಆಯಿತು. ಅದರಿಂದ ಖಾಸಗಿತನಕ್ಕೆ ತೊಂದರೆಯಿದೆ ಎಂದು ಹಲವರು ಕಂಬ ಸುತ್ತಲು ಆರಂಭಿಸಿ ಕೊನೆಗೆ ಸುಪ್ರಿಂಕೋರ್ಟ್ ತಲುಪಿದ್ದು ಏಕೆ?ಇಲ್ಲಿದೆ ನೋಡಿ ‘ಆಧಾರ್‌’ನ (ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ) ಈವರೆಗಿನ ಕಥಾನಕ.

ಹಿನ್ನೆಲೆ

ADVERTISEMENT

2010ರಲ್ಲಿ ‘ಆಧಾರ್’ ಯೋಜನೆಗೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಚಾಲನೆ ನೀಡಿದರು. ಯೋಜನೆಗೆ ಚಾಲನೆ ನೀಡುವ ಸಂದರ್ಭ ಸೋನಿಯಾ ಗಾಂಧಿ ಅವರು ಇದು ‘ರಾಜೀವ್ ಗಾಂಧಿ ಅವರ ಕನಸು’ ಎಂದು ಪ್ರತಿಕ್ರಿಯಿಸಿದ್ದರು. ಈ ಯೋಜನೆಯು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ಆಶಯ ಹೊಂದಿದೆ ಎಂದು ಹೇಳಿದ್ದರು.

ಮಹಾರಾಷ್ಟ್ರದ ತೆಂಬಳ್ಳಿ ಗ್ರಾಮದ 1000 ಗ್ರಾಮಸ್ಥರು ದೇಶದಲ್ಲಿಯೇ ಮೊದಲ ಬಾರಿಗೆ ಆಧಾರ್ ಪಡೆದುಕೊಂಡರು. 2010ರ ಸೆಪ್ಟೆಂಬರ್‌ನಲ್ಲಿ ಹಳ್ಳಿಯಲ್ಲಿ ಅದ್ದೂರಿ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದ ಕಾರಣದಿಂದ ಇಡೀ ಹಳ್ಳಿ ಹೊಸತನದಿಂದ ಬೀಗುತ್ತಿತ್ತು. ಈ ಯೋಜನೆಯನ್ನು ಅ.8ರಂದು ಕರ್ನಾಟಕಕ್ಕೂ ವಿಸ್ತರಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯೋಜನೆಗೆ ನೋಂದಣಿ ಮಾಡಿಕೊಂಡ ಮೊದಲಿಗರು.

ವಿಶಿಷ್ಟ ಗುರುತು ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ್ ನೀಲೆಕಣಿ

ವಿಶಿಷ್ಟ ಗುರುತು ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ್ ನೀಲೆಕಣಿ ಅವರ ಪ್ರಕಾರ ಆಧಾರ್ ಎನ್ನುವುದು ಕೇವಲ ಒಂದು ಸಂಖ್ಯೆಯಷ್ಟೇ ಅಲ್ಲ: ಇದು ಅವರ ಮಹತ್ವಾಕಾಂಕ್ಷೆ. ಕೇವಲ ನಾಲ್ಕು ವರ್ಷಗಳಲ್ಲಿ 60 ಕೋಟಿ ಜನರು ಆಧಾರ್ ಕಾರ್ಡ್ ಪಡೆದುಕೊಳ್ಳಲಿದ್ದಾರೆ. ಬ್ಯಾಂಕ್ ಖಾತೆ ತೆರೆಯಲು ‘ಆಧಾರ್‌’ ಸಂಖ್ಯೆಯನ್ನು ದಾಖಲೆಯಾಗಿ ಪರಿಗಣಿಸಬೇಕು ಎಂದು ಹಣಕಾಸು ಸಚಿವಾಲಯದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ನಿಲೇಕಣಿ ಹೇಳಿದ್ದರು. ಯೋಜನೆ ಆರಂಭವಾದ ಕೇವಲ ಐದು ತಿಂಗಳಲ್ಲಿ 16.7 ಲಕ್ಷ ಆಧಾರ್ ಸಂಖ್ಯೆಗಳನ್ನು ನೀಡಲಾಯಿತು. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಸಂಖ್ಯೆಗಳು ಕರ್ನಾಟಕದ್ದೇ ಆಗಿದ್ದವು. ಕೇವಲ ಒಂದು ವರ್ಷದಲ್ಲಿ 10 ಕೋಟಿ ಜನರು ಆಧಾರ್ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 75 ಲಕ್ಷ ಜನರು ಕರ್ನಾಟಕದವರೇ ಆಗಿದ್ದರು.

ಹಲವು ಸೇವೆ–ಸೌಲಭ್ಯಗಳಿಗೆ ‘ಆಧಾರ್’ ಕಡ್ಡಾಯವಾಯ್ತು

ಆಧಾರ್ ಚಾಲ್ತಿಗೆ ಬಂದ ಒಂದೇ ವರ್ಷದಲ್ಲಿ ಸಮಸ್ಯೆಯೂ ಆರಂಭವಾಯಿತು. ನೋಂದಣಿ ಪ್ರಕ್ರಿಯೆಯಲ್ಲಿರುವ ದೋಷಗಳ ಬಗ್ಗೆ ಗೃಹ ಇಲಾಖೆ ಆತಂಕ ವ್ಯಕ್ತಪಡಿಸಿತು.

ಕೇಂದ್ರ ಸರ್ಕಾರ ಆಧಾರ್ ಕಡ್ಡಾಯ ಮಾಡಬಹುದು ಎಂಬ ಆತಂಕ ನಿಜವಾಗುವ ಲಕ್ಷಣಗಳು 2012ರಲ್ಲಿ ಗೋಚರಿಸಿತು. ಮೈಸೂರಿನಲ್ಲಿ ಮೂರು ತೈಲ ನಿಗಮಗಳು ಎಲ್‌ಪಿಜಿ ಸಿಲಿಂಡರ್‌ ಮರುಭರ್ತಿ ವ್ಯವಸ್ಥೆಯನ್ನು ಆಧಾರ್‌ಗೆ ಲಿಂಕ್ ಮಾಡಿದವು. 2013ರಲ್ಲಿ ಬ್ಯಾಂಕ್‌ಗಳು ತಮ್ಮ ಸೇವೆಗಳಿಗೆ ಆಧಾರ್‌ ಜೋಡಿಸಲು ಆರಂಭಿಸಿದವು. 2013ರಲ್ಲಿ ಎಲ್‌ಪಿಜಿ ಸಬ್ಸಿಡಿ ಪಡೆಯಲು ಆಧಾರ್ ಐಡಿಯನ್ನು ಬ್ಯಾಂಕ್‌ ಖಾತೆಗಳಿಗೆ ಜೋಡಿಸಬೇಕು ಎನ್ನುವ ಸೂಚನೆ ಬಂತು.

ಸೆ.2013ರಲ್ಲಿ ಸುಪ್ರಿಂಕೋರ್ಟ್ ಆಧಾರ್‌ನ ಉಪಯುಕ್ತತೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯೊಂದರ ವಿಚಾರಣೆ ಆರಂಭಿಸಿತು. ನಂತರದ ದಿನಗಳಲ್ಲಿ ಆಧಾರ್ ಪ್ರಶ್ನಿಸಿ ಸಾಲುಸಾಲು ಅರ್ಜಿಗಳು ದಾಖಲಾದವು.

ಇದೇ ಸಂದರ್ಭ ಹಲವು ರಾಜ್ಯ ಸರ್ಕಾರಗಳು ವಿವಿಧ ಸಾರ್ವಜನಿಕ ಯೋಜನೆಗಳನ್ನು ಪಡೆಯಲು ಆಧಾರ್ ಕಡ್ಡಾಯ ಎಂದು ಘೋಷಿಸಿದವು.

ಕೇವಲ ಎರಡು ವಾರಗಳ ನಂತರ ‘ಯಾವುದೇ ಸೇವೆ ಅಥವಾ ಸೌಲಭ್ಯ ನಿರಾಕರಿಸಲು ಆಧಾರ್ ಇಲ್ಲದಿರುವುದು ಕಾರಣವಾಗಬಾರದು’ ಎಂದು ಸುಪ್ರಿಂಕೋರ್ಟ್ ಹೇಳಿತು. ಈ ತೀರ್ಪಿಗೆ ಪ್ರತಿಕ್ರಿಯಿಸಿದ ಅಂದಿನ ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯ್ಲಿ, ಎಲ್‌ಪಿಜಿ ಸಬ್ಸಿಡಿ ಪಡೆಯಲು ಅನಿವಾರ್ಯ ಎಂಬ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ. ಸುಪ್ರಿಂಕೋರ್ಟ್‌ ತೀರ್ಪು ಪ್ರಶ್ನಿಸಿ ಸರ್ಕಾರ ಅರ್ಜಿ ಸಲ್ಲಿಸಲಿದೆ ಎಂದು ಘೋಷಿಸಿದ್ದರು.

ಅಕ್ಟೋಬರ್ ತಿಂಗಳಲ್ಲಿ ಕೇಂದ್ರ ಸಂಪುಟವು ‘ರಾಷ್ಟ್ರೀಯ ಗುರುತು ಪ್ರಾಧಿಕಾರ ಮಸೂದೆ’ಗೆ ಅನುಮೋದನೆ ನೋಡಿತು. ಇದರಿಂದ ಪ್ರಾಧಿಕಾರಕ್ಕೆ ಶಾಸನಬದ್ಧ ಸ್ಥಾನಮಾನ ದೊರೆಯಿತು. ಇದಾದ ಕೆಲವೇ ದಿನಗಳಲ್ಲಿ ಪ್ರಾಧಿಕಾರವು ಆಧಾರ್ ಯೋಜನೆಯ ಪರವಾಗಿ ಸುಪ್ರಿಂಕೋರ್ಟ್‌ ಬಾಗಿಲು ತಟ್ಟತೊಡಗಿತು.

ಕಾಂಗ್ರೆಸ್‌ ಸರ್ಕಾರದ ಅಧಿಕಾರ ಅವಧಿ ಮುಗಿಯುವ ಕೆಲವೇ ತಿಂಗಳುಗಳ ಮೊದಲು ಸುಪ್ರಿಂಕೋರ್ಟ್‌, ‘ಆಧಾರ್ ಕಡ್ಡಾಯಗೊಳಿಸಿರುವ ಎಲ್ಲ ಸೂಚನೆಗಳು ಅನೂರ್ಜಿತ’ ಎಂದು ಘೋಷಿಸಿತು.

‌‌‌‌2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆಧಾರ್ ಯೋಜನೆಯ ಪ್ರಗತಿ ಪರಿಶೀಲಿಸಲು ನಿರ್ಧರಿಸಿತು. ಆಧಾರ್ ಗುರುತು ಸಂಖ್ಯೆ ಬಳಸಿಕೊಂಡು ವಿವಿಧ ಸಬ್ಸಿಡಿಗಳನ್ನು ಫಲಾನುಭವಿಗಳಿಗೆ ನೇರವಾಗಿ ವರ್ಗಾಯಿಸುವ ಸಾಧ್ಯತೆಗಳನ್ನು ಪರಿಶೀಲಿಸಿತು.

ಮೋದಿ ಆಡಳಿತದ ಆರಂಭದ ದಿನಗಳಲ್ಲಿ ಗೃಹ ಸಚಿವಾಲಯವು ಈ ವಿಚಾರದಲ್ಲಿ ಅಚ್ಚರಿಯ ಹೇಳಿಕೆಯೊಂದನ್ನು ಹೊರಳಿಸಿತು. ಆಧಾರ್‌ ಸಂಖ್ಯೆಯನ್ನು ಟೆಲಿಕಾಂ ಸಂಪರ್ಕಕ್ಕೆ ವಿಳಾಸದ ಪುರಾವೆಯಾಗಿ ಪರಿಗಣಿಸಬಹುದು ಎಂದು ಹೇಳಿದ್ದಲ್ಲದೆ ಯೋಜನೆಗೆ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿತು.

ಮುಂದಿನ ತಿಂಗಳುಗಳಲ್ಲಿ ಸರ್ಕಾರವು ವಿವಿಧ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಲು ಆರಂಭಿಸಿತು. ಪಾಸ್‌ಪೋರ್ಟ್‌, ಪ್ಯಾನ್‌ಕಾರ್ಡ್ ಮತ್ತು ಜನ್‌ಧನ್ ಖಾತೆಗಳಿಗೆ ಆಧಾರ್ ಅನಿವಾರ್ಯವಾಗಿತ್ತು. ಆದರೂ ಸುಪ್ರಿಂಕೋರ್ಟ್‌ ಸರ್ಕಾರದ ನಿರ್ಧಾರಗಳನ್ನು ಒಪ್ಪಿರಲಿಲ್ಲ. ‘ಸಾರ್ವಜನಿಕ ಸೇವೆ ಪಡೆದುಕೊಳ್ಳಲು ಆಧಾರ್ ಅನಿವಾರ್ಯವಲ್ಲ’ ಎಂದು ಸುಪ್ರಿಂಕೋರ್ಟ್ ಹೇಳಿತ್ತು.

2015ರಿಂದ ಆಧಾರ್‌ ವಿಷಯದಲ್ಲಿ ಸುಪ್ರೀಂಕೋರ್ಟ್‌ ಮತ್ತು ಕೇಂದ್ರದ ನಡುವೆ ಹಗ್ಗಜಗ್ಗಾಟ ನಡೆಯುತ್ತಲೇ ಇದೆ. ಆಧಾರ್‌ ಅನ್ನು ಹಿಂಪಡೆಯಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಹೇಳುತ್ತಲೇ ಬಂದಿದೆ. ಆಧಾರ ಕಡ್ಡಾಯವಲ್ಲ ಎನ್ನುವುದನ್ನು ಖಚಿತಪಡಿಸಿ ಎಂದು ಸುಪ್ರೀಂಕೋರ್ಟ್‌ ಸಹ ಕೇಂದ್ರಕ್ಕೆ ನಿರ್ದೇಶಿಸುತ್ತಲೇ ಇದೆ.

ಎಲ್ಲದಕ್ಕೂ ‘ಆಧಾರ್’ ಒಂದೇ ಸಾಕು

2016ರ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರ ಈ ವಿವಾದಿತ ಆಧಾರ್‌ ಮಸೂದೆಯನ್ನು ಹಣಕಾಸು ಮಸೂದೆಯ ಹೆಸರಿನಲ್ಲಿ ಮಂಡಿಸಿತು. ಇದಕ್ಕೆ ವಿರೋಧ ಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿದವು. ಹಣಕಾಸು ಮಸೂದೆಯನ್ನು ದಾಳವಾಗಿಸಿಕೊಂಡುಬಿಜೆಪಿ ಬಹುಮತವಿಲ್ಲದ ರಾಜ್ಯಸಭೆಯಲ್ಲಿ ಮಂಡಿಸದೆ ನೇರವಾಗಿ ಅಂಗೀಕಾರ ಪಡೆಯುವ ಹುನ್ನಾರ ಎಂದು ದೂರಿದವು. ಅದಾಗಿಯೂ ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಂಡಿತು.

ಆರ್ಥಿಕ ತಜ್ಞ ಅರವಿಂದ್‌ ಪನಗಾರಿ ಇದನ್ನು ಸ್ವಾಗತಿಸಿದರು. ಕಾಂಗ್ರೆಸ್‌ ಬಹುಮತವಿರುವ ರಾಜ್ಯಸಭೆ ಆಧಾರ್ ಮಸೂದೆಗೆ ಐದು ತಿದ್ದುಪಡಿಗಳನ್ನು ಸೂಚಿಸಿ ಅದನ್ನು ವಾಪಸ್‌ ಕಳುಹಿಸಿತು. ತಿದ್ದುಪಡಿ ಮಾಡಲು ನಿರಾಕರಿಸಿದ ಬಿಜೆಪಿಮಸೂದೆಯನ್ನು ಯಥಾವತ್ತಾಗಿಮಂಡಿಸಿತು. ಈ ಬಗ್ಗೆಅರುಣ್‌ ಜೇಟ್ಲಿ ಮಾತನಾಡಿ, ಗೌಪ್ಯತೆ ಎನ್ನುವುದೊಂದು ಸಂಪೂರ್ಣ ಹಕ್ಕಲ್ಲ ಎಂದು ಪ್ರತಿಪಾದಿಸಿದರು.

ಅದೇ ಸಮಯದಲ್ಲಿ ತೈಲ ಕಂಪನಿಗಳು ಆಧಾರ್‌ ಸಂಖ್ಯೆಯನ್ನು ಬ್ಯಾಂಕ್‌ ಖಾತೆಯೊಂದಿಗೆ ಜೋಡಿಸಬೇಕೆಂದು ತಗಾದೆ ತೆಗೆದವು. ಇಲ್ಲದಿದ್ದರೆ ಸಬ್ಸಡಿಗೆ ಕತ್ತರಿಹಾಕಲಾಗುವುದು ಎಂದು ಬೆದರಿಸಿದವು. ಇದಾದ ಒಂದು ದಿನದ ನಂತರ ಸರ್ಕಾರ ವಿದ್ಯಾರ್ಥಿ ವೇತನ ಮತ್ತು ಉನ್ನತ ಶಿಕ್ಷಣಾರ್ಥಿಗಳಿಗೆ ನೀಡುವ ಶಿಷ್ಯವೇತನ ಪಡೆಯಲು ಆಧಾರ್‌ ಕಡ್ಡಾಯ ಎಂದು ಕೇಂದ್ರಘೋಷಿಸಿತು. ನಂತರ ಇಕೆವೈಸಿ ಪರಿಚಯಿಸಿತು. ಮೊಬೈಲ್‌ ಮೂಲಕ ಯಾವುದೇ ವಹಿವಾಟು ನಡೆಸುವುದಕ್ಕೂ ಇಕೆವೈಸಿ ಅಗತ್ಯ.

2017ರ ಆರ್ಥಿಕ ವರ್ಷಾಂತ್ಯದಲ್ಲಿ ‘ಆಧಾರ್‌ ಈಗ ಕಡ್ಡಾಯ’ ಎನ್ನುವ ಮಾತು ಎಲ್ಲೆಡೆ ಪರಿಭ್ರಮಿಸಿತು. ಎಲ್‌ಪಿಜಿ ಗ್ಯಾಸ್‌ ಸಂಪರ್ಕಕ್ಕೆ, ಬೆಳೆ ವಿಮೆ, ಹೊಸ ಸಿಮ್‌ಕಾರ್ಡ್‌ ಪಡೆಯಲು, ವಾಹನ ನೋಂದಣಿಗೆ, ತೆರಿಗೆ ಮರುಪಾವತಿ, ಮರಣ ಪ್ರಮಾಣ ಪತ್ರ... ಹೀಗೆ ಎಲ್ಲಾ ಅಗತ್ಯ ಸೇವೆಗಳಿಗೂ ಆಧಾರ್ ಬೇಕೇ ಬೇಕು ಎಂಬಂತಾಯಿತು. ಒಂದು ಆಧಾರ ಎಲ್ಲವನ್ನೂ ಆಪೋಶನ ಪಡೆಯಿತು. ‘ಸ್ವಯಂಪ್ರೇರಣೆಯ ಕಡ್ಡಾಯ’ ಎಂಬ ಪದಕ್ಕೆ ನಾಂದಿ ಹಾಡಿತು.

ಶುರುವಾದವು ಸೋರಿಕೆಯ ಸಮಸ್ಯೆಗಳು

ಕೆಲ ಸಮಯಗಳ ನಂತರ, ಖಾಸಗಿತನ ಉಲ್ಲಂಘನೆಗೆ ಸಂಬಂಧಿಸಿದ ಅನೇಕ ವಿಷಯಗಳಲ್ಲಿ ಆಧಾರ ಕೇಂದ್ರ ಬಿಂದುವಾಯಿತು. ಆಧಾರ್‌ ಯೋಜನೆಯಲ್ಲಿ ಭದ್ರತೆಯ ಕೊರತೆ ಇದ್ದು, ಮೌಲ್ಯಯುತವಾದ ದತ್ತಾಂಶಗಳು ಸೋರಿಕೆಯಾಗುತ್ತಿವೆಎಂದು ವಕೀಲರು ಸಾಕಷ್ಟು ಉದಾಹರಣೆಗಳನ್ನು ನೀಡಿದ್ದರು. ‘ದಿ ಟ್ರಿಬ್ಯೂನ್‌’ ಪತ್ರಿಕೆ ₹500ಕ್ಕೆ ದೇಶದ ನಾಗರಿಕರ ಆಧಾರ್‌ ಮಾಹಿತಿ ವಾಟ್ಸ್‌ಆ್ಯಪ್‌ನಲ್ಲಿ ಮಾರಾಟವಾಗುತ್ತಿರುವ ಕುರಿತು ತನಿಖಾ ವರದಿ ಪ್ರಕಟಿಸಿತ್ತು. ಮಾಹಿತಿ ನೀಡಿದ್ದೇ ಮಹಾ ಅಪರಾಧವಾಗಿ ಆ ಪತ್ರಿಕೆಯ ವರದಿಗಾರ್ತಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಯಿತು.

ಆಧಾರ್‌ ದತ್ತಾಂಶ ಸುರಕ್ಷಿತವಲ್ಲ, ಅದಕ್ಕೆ ಹ್ಯಾಕರ್‌ಗಳು ಸುಲಭದಲ್ಲಿ ಕನ್ನ ಹಾಕಬಹುದು ಎಂದು ಅಮೆರಿಕದ ವ್ಹಿಸಲ್‌ ಬ್ಲೋವರ್‌ ಎಡ್ವರ್ಡ್‌ ಸ್ನೋಡೆನ್‌ಗೆ ನೋಟಿಸ್‌ ನೀಡಲಾಯಿತು. ಇದಾದ ಕೆಲವೇ ದಿನಗಳಲ್ಲಿ ಫ್ರಾನ್ಸ್‌ ಹ್ಯಾಕರ್‌ ಒಬ್ಬರು ಎಂಆಧಾರ್‌ ಆ್ಯಪ್‌ನಲ್ಲಿರುವ ಪ್ರಮುಖ ಲೋಪದೋಷವನ್ನು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು. ಟ್ರಾಯ್ ಮುಖ್ಯಸ್ಥರ ಆಧಾರ್ ಮಾಹಿತಿ ಹ್ಯಾಕ್ ಮಾಡಿ ಅವರ ಬ್ಯಾಂಕ್ ಖಾತೆಗೆ ಒಂದು ರೂಪಾಯಿ ಪಾವತಿಸಿದ್ದರು.

ಆಧಾರ್‌ನ ಇಷ್ಟೆಲ್ಲಾ ಲೋಪದೋಷಗಳು ಜಗಜ್ಜಾಹೀರಾದರೂ ಏನೂ ಪ್ರಯೋಜನ, ಯುಐಡಿಎಐ ಮತ್ತು ಸರ್ಕಾರ ಮಾತ್ರ ಆಧಾರ್‌ ಸುರುಕ್ಷಿತವಾಗಿದೆ ಎಂದೇ ಹೇಳಿದವು. ಸರ್ಕಾರಕ್ಕೆ ಎಷ್ಟು ಆತ್ಮವಿಶ್ವಾಸವಿತ್ತೆಂದರೆ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅವರು ಸುಪ್ರೀಂಕೋರ್ಟ್‌ನಲ್ಲಿ ಆಧಾರ ಮಾಹಿತಿಯನ್ನು ಕನ್ನ ಹಾಕಲು ಸಾಧ್ಯವೇ ಇಲ್ಲ. ಅದು 13 ಅಡಿ ಎತ್ತರದ ಮತ್ತು 5 ಅಡಿ ದಪ್ಪದ ಗೋಡೆಯ ಒಳಗೆ ಸುರಕ್ಷಿತವಾಗಿದೆ ಎಂದು ಪ್ರತಿಪಾದಿಸಿದ್ದರು. ಇದನ್ನು ಕೇಳಿ, ಸಾಕಷ್ಟು ಮಂದಿ ಸರ್ಕಾರವನ್ನು ಗೇಲಿ ಮಾಡಿದರು. ಯುಐಡಿಎಐ ಕಾರ್ಯನಿರ್ವಾಹಕ ಅಧಿಕಾರಿ ಅಜಯ್‌ ಭೂಷಣ್‌ ಪಾಂಡೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಆಧಾರ್‌ನ ಒಂದು ಚೂರು ಮಾಹಿತಿಯನ್ನು ಡಿಕೋಡ್‌ ಮಾಡಲು ಶತಶತಮಾನಗಳೇ ಬೇಕಾಗುತ್ತವೆ’ ಎಂದಿದ್ದರು.

ಟ್ರಾಯ್‌ ಮುಖ್ಯಸ್ಥ ಆರ್‌.ಎಸ್‌. ಶರ್ಮ ತಮ್ಮ ಆಧಾರ್‌ ಸಂಖ್ಯೆಯನ್ನು ಟ್ವೀಟ್‌ ಮಾಡಿ, ಯಾರಾದರೂ ಇದನ್ನು ಬಳಸಿಕೊಂಡು ನನಗೆ ಮೋಸ ಮಾಡಬಹುದು ಎಂದು ಸವಾಲು ಹಾಕಿದ್ದರು. ಮೈಕ್ರೊಸಾಫ್ಟ್‌ ಕಂಪೆನಿಯ ಸಹ ಸ್ಥಾಪಕ ಬಿಲ್‌ಗೇಟ್ಸ್‌ ಆಧಾರ್‌ ಪರವಾಗಿ ಮಾತನಾಡಿ, ಅದರಿಂದ ಯಾವುದೇ ಖಾಸಗಿತನದ ಸಮಸ್ಯೆ ಉಂಟಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಅಲ್ಲದೆ, ಇತರೆ ದೇಶಗಳು ಇದನ್ನು ಅನುಸರಿಸಬಹುದು ಎಂದಿದ್ದರು.

ಕಾನೂನು ಸಮರ

ನಿರಾಕರಣೆ ನಿರಂತರವಾಗಿರುವ ನಡುವೆಯೇ ಗೊಂದಲದ ಹೇಳಿಕೆಗಳು ಆಧಾರ್‌ ಯೋಜನೆಯನ್ನು ಸಮರ್ಥಿಸುವ ಉದ್ದೇಶವನ್ನು ಹೊರಹಾಕುತ್ತವೆ ಮತ್ತು ಅದರ ನಕರಾತ್ಮಕ ಅಂಶಗಳನ್ನು ಎತ್ತಿ ಹಿಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಆಧಾರ್‌ನಿಂದ ಮಾಹಿತಿ ಸೋರಿಕೆಯಾಗುತ್ತಿರುವ ಪ್ರಕರಣಗಳನ್ನು ಸರ್ಕಾರ ಹಾಗೂ ಯುಐಡಿಎಐ ನಿರ್ವಹಿಸುತ್ತಿರುವ ಬಗ್ಗೆ ಖಾಸಗಿತನದ ಹೋರಾಟಗಾರರಿಗೆ ಅಸಮಧಾನವಿದೆ.

ನಾಗರಿಕರ ಖಾಸಗಿತನದ ಹಕ್ಕು ಸಂವಿಧಾನವೇ ಸಂರಕ್ಷಿಸಿರುವ ಮೂಲಭೂತ ಹಕ್ಕು ಎಂಬ ಸುಪ್ರೀಂಕೋರ್ಟ್‌ ತೀರ್ಪಿನಿಂದ ಉತ್ತೇಜನಗೊಂಡ ಹೋರಾಟಗಾರರು, ಆಧಾರ್‌ ವಿಷಯವನ್ನು ಒಂದೇ ಭಾರಿಗೆ ಇತ್ಯರ್ಥ ಮಾಡಿಕೊಳ್ಳಲು ಕೋರ್ಟ್‌ ಮೆಟ್ಟಿಲೇರಲು ನಿರ್ಧರಿದರು. ಇದರಿಂದಾಗಿ ಆಧಾರ್‌ಗೆ ಸಂಬಂಧಿಸಿದ ಸಾಲು ಸಾಲು ಪ್ರಕರಣಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿತು.

2017ರಲ್ಲಿ ಸುಪ್ರೀಂಕೊರ್ಟ್‌ ಆಧಾರ್‌ ಸಿಂಧುತ್ವದ ಕುರಿತು ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿತು. ಆಧಾರ್‌ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳ ವಿಚಾರಣೆಗಾಗಿ ಐವರು ನ್ಯಾಯಮೂರ್ತಿಗಳ ಪೀಠ ರಚಿಸಿತು.ಈ ವಿಷಯದ ಕುರಿತು ಸುಪ್ರೀಂಕೋರ್ಟ್‌ ಈ ಮೊದಲು ವಿಚಾರಣೆ ನಡೆಸಿದ ವಿಷಯಗಳು, ವಿವಿಧ ಯೋಜನೆಗಳಿಗೆ ಆಧಾರ್‌ ಜೋಡಣೆ ಮಾಡುವುದಕ್ಕೆ ಗಡುವು ನಿಗದಿಪಡಿಸಿದ್ದು ಸೇರಿದಂತೆ ಎಲ್ಲದವರ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಪೀಠವು ‘ಆಧಾರ್ ಸಿಂಧುತ್ವ’ ಕುರಿತ ಅಂತಿಮ ತೀರ್ಪನ್ನು ಇಂದು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.