ADVERTISEMENT

ಬೀದಿ ನಾಯಿಗಳಿಗೂ ಆಹಾರದ ಹಕ್ಕಿದೆ: ದೆಹಲಿ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 18:59 IST
Last Updated 1 ಜುಲೈ 2021, 18:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಬೀದಿ ನಾಯಿಗಳಿಗೆ ಇತರರಿಗೆ ತೊಂದರೆ ಅಥವಾ ಕಿರುಕುಳವಾಗದ ರೀತಿಯಲ್ಲಿ ಆಹಾರ ನೀಡುವ ಹಕ್ಕು ನಾಗರಿಕರಿಗೆ ಇದೆ. ಬೀದಿ ನಾಯಿಗಳಿಗೆ ಆಹಾರ ನೀಡುವುದನ್ನು ಯಾರೂ ಕೂಡ ನಿರ್ಬಂಧಿಸಬಾರದು’ ಎಂದು ದೆಹಲಿ ಹೈಕೋರ್ಟ್ ಗುರುವಾರ ಹೇಳಿದೆ.

‘ಪ್ರಾಣಿಗಳಿಗೆ ಕಾನೂನಿನ ಅಡಿಯಲ್ಲಿ ಜೀವಿಸುವ, ಆಹಾರ ಪಡೆಯುವ ಹಕ್ಕಿದೆ. ಪ್ರಾಣಿಗಳ ಗೌರವ ಮತ್ತು ಘನತೆಯನ್ನು ಎತ್ತಿಹಿಡಿಯುವುದು, ಅವುಗಳ ರಕ್ಷಣೆ ಮಾಡುವುದು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬ ನಾಗರಿಕರ ನೈತಿಕ ಬಾಧ್ಯತೆಗಳಾಗಿವೆ. ಬೀದಿ ನಾಯಿಗಳಷ್ಟೇ ಅಲ್ಲ, ಎಲ್ಲ ಜೀವಿಗಳ ಬಗ್ಗೆಯೂ ಮನುಷ್ಯರಾದವರು ಸಹಾನುಭೂತಿ ತೋರಿಸಬೇಕು’ ಎಂದು ನ್ಯಾಯಮೂರ್ತಿ ಜೆ.ಆರ್‌. ಮಿಧಾ ಅವರಿದ್ದ ಏಕಸದಸ್ಯ ಪೀಠ ಒತ್ತಿ ಹೇಳಿದೆ.

ಡಾ. ಮಾಯಾ ಡಿ. ಚಬ್ಲಾನಿ ಅವರ ಮನವಿ ಅರ್ಜಿಯನ್ನು ಆಲಿಸಿದ ನ್ಯಾಯಾಲಯವು, ಪ್ರಾಣಿಗಳಿಗೆ ಕ್ರೌರ್ಯ ತೋರಿಸುವುದು ಕಾನೂನಿಗೆ ವಿರುದ್ಧವಾದುದು. ಈ ವಿಚಾರದಲ್ಲಿ ಉತ್ತಮ ಸ್ಥರದಲ್ಲಿರುವ ನಾಗರಿಕರು ಮತ್ತು ಸರ್ಕಾರಿ ಅಧಿಕಾರಿಗಳಲ್ಲೇ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಬೀದಿ ನಾಯಿಗಳನ್ನು ಪಾಲನೆ ಮಾಡುವವರಿಗೆ ಅಥವಾ ಬೀದಿ ನಾಯಿಗಳಿಗೆ ಆಹಾರ ಹಾಕುವವರಿಗೆ ಯಾವುದೇ ತೊಂದರೆ ಇಲ್ಲ ಎನ್ನುವ ಭರವಸೆ ನೀಡುವುದು, ಪೊಲೀಸ್‌ ನೆರವು ಸೇರಿ ಸಂಬಂಧಿಸಿದ ಎಲ್ಲ ಇಲಾಖೆಗಳ ಸಹಕಾರ ಒದಗಿಸುವುದು ಆರ್‌ಡಬ್ಲ್ಯೂಎ (ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ಸ್) ಅಥವಾ ಮಹಾನಗರ ಪಾಲಿಕೆ ಮತ್ತು ಎಲ್ಲ ಸರ್ಕಾರಿ ಅಧಿಕಾರಿಗಳ ಕರ್ತವ್ಯ ಹಾಗೂ ಜವಾಬ್ದಾರಿ ಎಂದು ನ್ಯಾಯಾಲಯ ಹೇಳಿದೆ.

ಬೀದಿ ನಾಯಿಗಳ ಕಲ್ಯಾಣಕ್ಕಾಗಿ ನ್ಯಾಯಾಲಯದ ಮಾರ್ಗಸೂಚಿಗಳನ್ನು ಜಾರಿಗೆ ತರಲು ನ್ಯಾಯಾಲಯವು ಪಶುಸಂಗೋಪನಾ ಇಲಾಖೆಯ ನಿರ್ದೇಶಕರು ಅಥವಾ ಅವರ ನಾಮಿನಿ ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿ ರಚಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.