ADVERTISEMENT

ಮಹರೌಲಿ ಉದ್ಯಾನದಲ್ಲಿರುವ ಕಟ್ಟಡಗಳಿಗೆ ಧಾರ್ಮಿಕ ಮಹತ್ವ: ಎಎಸ್‌ಐ

ಪಿಟಿಐ
Published 25 ಡಿಸೆಂಬರ್ 2024, 12:51 IST
Last Updated 25 ಡಿಸೆಂಬರ್ 2024, 12:51 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ಮಹರೌಲಿ ಪುರಾತತ್ವ ಉದ್ಯಾನದಲ್ಲಿ ಇರುವ ಎರಡು ಕಟ್ಟಡಗಳು ಧಾರ್ಮಿಕ ಮಹತ್ವವನ್ನು ಹೊಂದಿವೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಇಲ್ಲಿ ಇರುವ ಆಶಿಕ್ ಅಲ್ಲಾ ದರ್ಗಾ ಮತ್ತು 13ನೇ ಶತಮಾನದ ಸೂಫಿ ಸಂತ ಬಾಬಾ ಫರೀದ್ ಅವರ ಚಿಲ್ಲಾಗಾಹ್‌ ಸ್ಥಳಕ್ಕೆ ಮುಸ್ಲಿಮರು ಪ್ರತಿದಿನವೂ ಭೇಟಿ ನೀಡುತ್ತಾರೆ ಎಂದು ಎಎಸ್‌ಐ ಹೇಳಿದೆ.

ಶೇಖ್ ಶಹೀಬುದ್ದೀನ್‌ (ಆಶಿಕ್ ಅಲ್ಲಾ) ಅವರ ಗೋರಿಯ ಮೇಲೆ ಇರುವ ಬರಹದಲ್ಲಿ, ಇದನ್ನು 1317ರಲ್ಲಿ ನಿರ್ಮಿಸಲಾಯಿತು ಎಂದು ಉಲ್ಲೇಖಿಸಲಾಗಿದೆ ಎಂಬುದನ್ನು ಇಲಾಖೆಯು ಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ. ‘ಜೀರ್ಣೋದ್ಧಾರ ಹಾಗೂ ಸಂರಕ್ಷಣೆಯ ಉದ್ದೇಶದಿಂದ ಕಟ್ಟಡಕ್ಕೆ ತಂದಿರುವ ಬದಲಾವಣೆಗಳ ಕಾರಣದಿಂದಾಗಿ ಅವುಗಳ ಐತಿಹಾಸಿಕ ಮಹತ್ವದ ಮೇಲೆ ಪರಿಣಾಮ ಉಂಟಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಗೋರಿಯು ಪೃಥ್ವಿರಾಜ ಚೌಹಾಣ್ ಅವರ ಕೋಟೆಗೆ ಸನಿಹದಲ್ಲಿ ಇದೆ. ‘ಪುರಾತನ ಸ್ಮಾರಕಗಳು ಹಾಗೂ ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಕಾಯ್ದೆ’ಯ ಅನ್ವಯ 200 ಮೀಟರ್‌ಗಳ ನಿಯಂತ್ರಿತ ವಲಯದಲ್ಲಿ ಇದು ಬರುತ್ತದೆ ಎಂದು ಇಲಾಖೆ ಹೇಳಿದೆ.

ಮೆಹರೌಲಿ ಪುರಾತತ್ವ ಉದ್ಯಾನದಲ್ಲಿ ಇರುವ ಧಾರ್ಮಿಕ ಕಟ್ಟಡಗಳಿಗೆ ರಕ್ಷಣೆ ಕಲ್ಪಿಸಬೇಕು ಎಂದು ಜಮೀರ್ ಅಹ್ಮದ್ ಜುಮ್ಲಾನಾ ಎನ್ನುವವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಅತಿಕ್ರಮಣ ತೆರವು ಮಾಡುವ ಹೆಸರಿನಲ್ಲಿ, ಐತಿಹಾಸಿಕ ಮಹತ್ವವನ್ನು ತಿಳಿದುಕೊಳ್ಳದೆಯೇ ಕಟ್ಟಡಗಳನ್ನು ಧ್ವಂಸಗೊಳಿಸಲು ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಯೋಜಿಸಿದೆ ಎಂದು ಅವರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.