ADVERTISEMENT

ಗ್ರಾಹಕ ಕಾಯ್ದೆಗೆ ಶಿಕ್ಷಣ ಸಂಸ್ಥೆ: ವಿವಿಗಳ ಸೇವೆ ಪ್ರಶ್ನಿಸಿ ಅರ್ಜಿ

ಪಿಟಿಐ
Published 21 ಅಕ್ಟೋಬರ್ 2020, 11:48 IST
Last Updated 21 ಅಕ್ಟೋಬರ್ 2020, 11:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸೇವೆಗಳಲ್ಲಿ ಕೊರತೆಯಾದಾಗ ಶಿಕ್ಷಣ ಸಂಸ್ಥೆಗಳು ಅಥವಾ ವಿಶ್ವವಿದ್ಯಾಲಯಗಳ ವಿರುದ್ಧಗ್ರಾಹಕ ಸಂರಕ್ಷಣಾ ಕಾನೂನಿನಡಿ ಮೊಕದ್ದಮೆ ದಾಖಲಿಸಬಹುದೇ ಎಂಬ ಪ್ರಶ್ನೆಯನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ಸಮ್ಮತಿಸಿದ್ದು, ಈ ಬಗ್ಗೆ ಉನ್ನತ ನ್ಯಾಯಾಲಯದಲ್ಲಿ ‘ವಿಭಿನ್ನ ಅಭಿಪ್ರಾಯಗಳಿವೆ‘ ಎಂದು ಹೇಳಿದೆ.

ಸೇವೆ ನೀಡುವಲ್ಲಿ ವತ್ಯಾಸವಾಗಿದೆ ಎಂದು ಆಕ್ಷೇಪಿಸಿ ತಮಿಳುನಾಡಿನ ವಿನಾಯಕ ಮಿಷನ್ ವಿಶ್ವವಿದ್ಯಾಲಯದ ವಿರುದ್ಧ ಮನು ಸೋಲಂಕಿ ಮತ್ತಿತರ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಗಳಾದ ಡಿ.ವೈ.ಚಂದ್ರಚೂಡ್, ಇಂದೂ ಮಲ್ಹೋತ್ರಾ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ಪೀಠ ಪರಿಗಣಿಸಿದೆ.

‘ಶಿಕ್ಷಣ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳು ಗ್ರಾಹಕ ಸಂರಕ್ಷಣಾ ಕಾಯ್ದೆ 1986 ರ ನಿಬಂಧನೆಗಳಿಗೆ ಒಳಪಡುತ್ತವೆಯೋ, ಇಲ್ಲವೋ ಎಂಬುದರ ಬಗ್ಗೆ ಈ ನ್ಯಾಯಾಲಯದಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಮನವಿಯೊಂದರ ಅವಶ್ಯಕತೆ ಇದೆ‘ ಎಂದು ಸುಪ್ರೀಂಕೋರ್ಟ್‌ ಅ. 15ರ ಆದೇಶದಲ್ಲಿ ಹೇಳಿತ್ತು.

ADVERTISEMENT

ಈ ವೇಳೆ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗದ (ಎನ್‌ಸಿಡಿಆರ್‌ಸಿ) ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗೆ ಆರು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ವಿಶ್ವವಿದ್ಯಾಲಯದ ಪರವಾಗಿ ಹಾಜರಾದ ವಕೀಲ ಸೌಮ್ಯಜಿತ್ ಅವರನ್ನು ಅದು ಕೇಳಿತ್ತು.

ಮಹರ್ಷಿ ದಯಾನಂದ ವಿಶ್ವವಿದ್ಯಾಲಯ ಮತ್ತು ಪಿಟಿ ಕೋಶಿ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್, ‘ಶಿಕ್ಷಣ ಸರಕು ಅಲ್ಲ ಮತ್ತು ಶಿಕ್ಷಣ ಸಂಸ್ಥೆಗಳು ಯಾವುದೇ ರೀತಿಯ ಸೇವೆಯನ್ನು ನೀಡುತ್ತಿಲ್ಲ ಎಂದು ಹೇಳಲಾಗಿದೆ. ಆದ್ದರಿಂದ, ಪ್ರವೇಶ ಮತ್ತು ಶುಲ್ಕದ ವಿಷಯದಲ್ಲಿ, ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ, ಗ್ರಾಹಕರ ವೇದಿಕೆ ಅಥವಾ ಆಯೋಗಗಳಲ್ಲಿ ತೀರ್ಮಾನಿಸುವಂತಹ ಸೇವೆಯ ಕೊರತೆಯ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ.

ಇವೆಲ್ಲದರ ನಡುವೆಯೂ, ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು ಗ್ರಾಹಕ ಸಂರಕ್ಷಣಾ ಕಾಯ್ದೆ 1986 ರ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ತೀರ್ಮಾನಿಸಲಾದ ಇತರ ತೀರ್ಪುಗಳನ್ನು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಸೋಲಂಕಿ ಮತ್ತು ಇತರೆ ಎಂಟು ವೈದ್ಯಕೀಯ ವಿದ್ಯಾರ್ಥಿಗಳು, ನಮಗೆ ವಿಶ್ವವಿದ್ಯಾಲಯದಿಂದ ‘ಸೇವೆಯಲ್ಲಿ ನಷ್ಟ, ಶೈಕ್ಷಣಿಕ ವರ್ಷ, ವೃತ್ತಿ ಅವಕಾಶಗಳು ಮತ್ತು ಮಾನಸಿಕ ಮತ್ತು ದೈಹಿಕವಾಗಿ ತೊಂದರೆಯಾಗಿದೆ‘ ಎಂದು ಆರೋಪಿಸಿ ತಲಾ ₹1.4 ಕೋಟಿ ಪರಿಹಾರ ನೀಡುವಂತೆ ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.