ADVERTISEMENT

ಬಡ್ಡಿ ಮೇಲಿನ ಬಡ್ಡಿ ಮನ್ನಾ ವಿಚಾರವಾಗಿ 3 ದಿನದಲ್ಲಿ ನಿರ್ಧಾರ ಕೈಗೊಳ್ಳಿ: ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 15:52 IST
Last Updated 12 ಜೂನ್ 2020, 15:52 IST
   

ನವದೆಹಲಿ: ಸಾಲದ ಕಂತು ಮರುಪಾವತಿ ಮುಂದೂಡಿಕೆ ಅವಧಿಯ ಬಡ್ಡಿಯ ಮೇಲಿನ ಬಡ್ಡಿ ಮನ್ನಾ ವಿಚಾರದಲ್ಲಿ ಮೂರು ದಿನಗಳೊಳಗೆ ಸಭೆ ಸೇರಿ ನಿರ್ಧಾರ ಕೈಗೊಳ್ಳಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ) ಸುಪ್ರೀಂ ಕೋರ್ಟ್‌ ಶುಕ್ರವಾರ ಸೂಚಿಸಿದೆ.

ಬಡ್ಡಿ ಪಾವತಿಯನ್ನು ನಿರ್ದಿಷ್ಟ ಅವಧಿಗೆ ಮುಂದೂಡಿದ್ದರೆ, ಆ ಅವಧಿಯ ಬಡ್ಡಿಯ ಮೇಲೆ ಬ್ಯಾಂಕುಗಳು ಬಡ್ಡಿ ಹೇರಬಾರದು ಎಂದು ಪೀಠವು ಸ್ಪಷ್ಟವಾಗಿ ಹೇಳಿದೆ.

ಮುಂದೂಡಿಕೆಯ ಪೂರ್ಣ ಅವಧಿಯ ಬಡ್ಡಿ ಮನ್ನಾ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಸೂಚಿಸಿಲ್ಲ. ಇದು ಬಡ್ಡಿಯ ಮೇಲೆ ಬ್ಯಾಂಕುಗಳು ವಿಧಿಸುವ ಬಡ್ಡಿಗಷ್ಟೇ ಸೀಮಿತ ಎಂದು ನ್ಯಾಯಮೂರ್ತಿಗಳಾದ ‌ಅಶೋಕ್‌ ಭೂಷಣ್‌, ಎಸ್‌.ಕೆ. ಕೌಲ್‌ ಮತ್ತು ಎಂ.ಆರ್‌. ಶಾ ಅವರ ಪೀಠವು ಸ್ಪಷ್ಟಪಡಿಸಿದೆ.

ADVERTISEMENT

ಆರ್‌ಬಿಐ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರಕ್ಕೆ ಪೀಠವು ಸೂಚಿಸಿದೆ.

ಕಂತು ಪಾವತಿಯ ಅವಧಿಯನ್ನು ಆರು ತಿಂಗಳ ಅವಧಿಗೆ ಮುಂದೂಡಲಾಗಿದೆ. ಈ ಅವಧಿಗೆ ಬಡ್ಡಿ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಎಸ್‌ಬಿಐ ಮತ್ತು ಭಾರತೀಯ ಬ್ಯಾಂಕುಗಳ ಸಂಘಟನೆಯು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಮುಂದೂಡಿಕೆ ಅವಧಿಯ ಬಡ್ಡಿಯ ಮೊತ್ತವನ್ನು ಸಾಲ ಎಂದು ಪರಿಗಣಿಸಿ, 2021ರ ಮಾರ್ಚ್‌ 31ರ ಒಳಗೆ ಪಾವತಿಸುವ ಅವಕಾಶವನ್ನು ಬ್ಯಾಂಕುಗಳು ನೀಡಬಹುದು. ಆದರೆ, ಇದು ಆಯಾ ಬ್ಯಾಂಕುಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ಆರ್‌ಬಿಐ, ಕೋರ್ಟ್‌ಗೆ ಈ ಹಿಂದೆಯೇ ಹೇಳಿತ್ತು.

ಮಾರ್ಚ್‌ 27, ಏಪ್ರಿಲ್‌ 17ರಂದು ಸುತ್ತೋಲೆ ಹೊರಡಿಸಿದ್ದ ಆರ್‌ಬಿಐ, ಸಾಲದ ಕಂತು ಪಾವತಿಯನ್ನು ಮೂರು ತಿಂಗಳು ಮುಂದೂಡಿತ್ತು. ಬಳಿಕ, ಅದನ್ನು ಆಗಸ್ಟ್‌ 31ರವರೆಗೆ ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.