ADVERTISEMENT

ದೆಹಲಿ ಹೈಕೋರ್ಟ್‌ ವಿರುದ್ಧದ ಅರ್ಜಿ ವಿಚಾರಣೆ ನಡೆಸಲು ‘ಸುಪ್ರೀಂ’ ಸಮ್ಮತಿ

ಪಿಟಿಐ
Published 5 ಮೇ 2021, 9:44 IST
Last Updated 5 ಮೇ 2021, 9:44 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ದೆಹಲಿಗೆ ಆಮ್ಲಜನಕ ಪೂರೈಕೆ ವಿಚಾರವಾಗಿ ನ್ಯಾಯಾಂಗ ನಿಂದನೆ ನೋಟಿಸ್ ನೀಡಿರುವ ದೆಹಲಿ ಹೈಕೋರ್ಟ್ ನಡೆಯನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್‌ ಒಪ್ಪಿಗೆ ನೀಡಿದೆ.

ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದ ಸ್ವಯಂ ಪ್ರೇರಿತ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಮೂರ್ತಿ ಜೆ.ಚಂದ್ರಚೂಡ್‌ ಅವರು ಬುಧವಾರ ಲಭ್ಯವಿಲ್ಲದ ಕಾರಣ ಕೇಂದ್ರದ ಪರ ಸಾಲಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಪೀಠದ ಮೊರೆ ಹೋದರು.

ಆದರೆ ಈ ಪ್ರಕರಣವನ್ನು ಜೆ.ಚಂದ್ರಚೂಡ್‌ ನೇತೃತ್ವದ ಪೀಠವೇ ವಿಚಾರಣೆ ನಡೆಸಬೇಕು ಎಂದು ನ್ಯಾಯಮೂರ್ತಿ ಎನ್‌.ವಿ ರಮಣ ಅವರು ಸೂಚಿಸಿದರು.

ADVERTISEMENT

ಕೇಂದ್ರ ಸರ್ಕಾರವು ಮೇ 3ರೊಳಗೆ ದೆಹಲಿಯಲ್ಲಿ ಆಮ್ಲಜನಕ ಕೊರತೆಯಿಂದ ಉಂಟಾಗಿರುವ ‍ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂದು ಏಪ್ರಿಲ್‌ 30ರಂದು ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿತ್ತು. ಆದರೆ ಈ ನಿರ್ದೇಶನವನ್ನು ಕೇಂದ್ರ ಪಾಲಿಸಲಿಲ್ಲ ಎಂಬ ಕಾರಣಕ್ಕೆ ದೆಹಲಿ ಹೈಕೋರ್ಟ್‌ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿತ್ತು.

ರಾಷ್ಟ್ರ ರಾಜಧಾನಿಗೆ 490 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಸುವಂತೆ ದೆಹಲಿ ಹೈಕೋರ್ಟ್‌ ಸೂಚನೆ ನೀಡಿತ್ತು. ಅಲ್ಲದೆ ಸುಪ್ರೀಂಕೋರ್ಟ್‌ ಕೂಡ ದೆಹಲಿಗೆ 700 ಮೆಟ್ರಿಕ್‌ ಟನ್‌ ಆಮ್ಲಜನಕ ಪೂರೈಸುವಂತೆ ಕೇಂದ್ರಕ್ಕೆ ಸೂಚನೆ ನೀಡಿತ್ತು. ಈ ಎರಡೂ ಆದೇಶವನ್ನು ಕೇಂದ್ರ ಪಾಲಿಸಲಿಲ್ಲ. ಹೀಗಿರುವಾಗ ಯಾಕೆ ಕೇಂದ್ರಕ್ಕೆ ನ್ಯಾಯಾಂಗ ನಿಂದನೆ ನೋಟಿಸ್‌ ನೀಡಬಾರದು ಎಂದು ಪ್ರಶ್ನಿಸಿರುವ ದೆಹಲಿ ಹೈಕೋರ್ಟ್‌, ಇದಕ್ಕೆ ಕಾರಣವನ್ನು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮಂಗಳವಾರ ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.