ADVERTISEMENT

ಕೃಷಿ ಕಾಯ್ದೆ ಹಿಂಪಡೆಯುವ ನಿರ್ಧಾರಕ್ಕೆ ವಿರುದ್ಧವಾಗಿದ್ದ 'ಸುಪ್ರೀಂ' ಸಮಿತಿ

ಪಿಟಿಐ
Published 21 ಮಾರ್ಚ್ 2022, 11:01 IST
Last Updated 21 ಮಾರ್ಚ್ 2022, 11:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರೈತರ ತೀವ್ರ ಪ್ರತಿರೋಧದಿಂದಾಗಿ 2021ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ಹಿಂಪಡೆದ 3 ಕೃಷಿ ಕಾಯ್ದೆಗಳು ರೈತರಿಗೆ ಪೂರಕವಾಗಿದ್ದವು ಎಂದು ಈ ಬಗ್ಗೆ ಅಧ್ಯಯನಕ್ಕಾಗಿ ಸುಪ್ರೀಂ ಕೋರ್ಟ್‌ನಿಂದ ನೇಮಕವಾಗಿದ್ದ ಸಮಿತಿ ಪ್ರತಿಪಾದಿಸಿದೆ.

ಈ ಕಾಯ್ದೆಗಳಿಂದ ರೈತರಿಗೆ ಲಾಭವಾಗಲಿದ್ದು, ಯಾವುದೇ ಕಾರಣಕ್ಕೂ ಅವುಗಳನ್ನು ಹಿಂಪಡೆಯಬಾರದು ಎಂದು ಈ ಸಮಿತಿ ಶಿಫಾರಸು ಮಾಡಿತ್ತು ಎಂದು ಇದೀಗ ತಿಳಿದುಬಂದಿದೆ. ಈ ಕುರಿತು 2021ರ ಮಾರ್ಚ್ 19ರಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆ ಮಾಡಿದ್ದ ಸಮಿತಿಯ ವರದಿ ಇದೀಗ ಬಹಿರಂಗವಾಗಿದೆ.

ಮೂವರು ಸದಸ್ಯರ ಈ ಸಮಿತಿಯು, ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ನೀಡುವ ಸ್ವಾತಂತ್ರ್ಯವನ್ನು ರಾಜ್ಯಗಳಿಗೆ ನೀಡಬೇಕು ಎಂಬುದು ಸೇರಿದಂತೆ ಈ ಕಾಯ್ದೆಯಲ್ಲಿ ಮತ್ತಿತ್ತರ ಬದಲಾವಣೆಗಳನ್ನು ಮಾಡಬೇಕು ಎಂದು ಸಲಹೆ ನೀಡಿತ್ತು.

ADVERTISEMENT

ಸಮಿತಿಯಲ್ಲಿದ್ದ ಮೂವರು ಸದಸ್ಯರ ಪೈಕಿ ಅನಿಲ್ ಗಣಾವತ್ ಎಂಬುವರು ಈ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, 'ಈ ವರದಿಯನ್ನು ಸಾರ್ವಜನಿಕಗೊಳಿಸಲು ಸುಪ್ರೀಂ ಕೋರ್ಟ್‌ಗೆ 3 ಬಾರಿ ಪತ್ರ ಬರೆದಿದ್ದೆವು. ಆದರೆ ನಮಗೆ ಸುಪ್ರೀಂನಿಂದ ಪ್ರತಿಕ್ರಿಯೆ ಮಾತ್ರ ಸಿಗಲಿಲ್ಲ. ಇದೀಗ ಈ ಕಾಯ್ದೆಗಳನ್ನು ಹಿಂಪಡೆಯಲಾದ ಕಾರಣ ಈ ವರದಿಗೆ ಯಾವುದೇ ಮಹತ್ವವಿಲ್ಲ. ಇದೇ ಕಾರಣಕ್ಕೆ ವರದಿಯ ಸಾರಂಶವನ್ನು ಬಿಡುಗಡೆಗೊಳಿಸಿದ್ದೇನೆ' ಎಂದು ಹೇಳಿದರು.

ಈ ಕಾಯ್ದೆಗಳಿಂದ ಭವಿಷ್ಯದಲ್ಲಿ ಕೃಷಿ ವಲಯಕ್ಕೆ ಅನುಕೂಲವಾಗುತ್ತಿತ್ತು. ಒಟ್ಟಾರೆ 73 ರೈತ ಸಂಘಟನೆಗಳ ಪೈಕಿ 3.3 ಕೋಟಿ ರೈತರನ್ನು ಒಳಗೊಂಡ 61 ರೈತ ಸಂಘಟನೆಗಳು ನೂತನ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದರು ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷದ ನವೆಂಬರ್ 19ರಂದು ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕೃಷಿ ಕಾಯ್ದೆಗಳ ಲಾಭವನ್ನು ಮನವರಿಕೆ ಮಾಡಿಕೊಡಲಾಗಲಿಲ್ಲ. ಹೀಗಾಗಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಣೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.