ADVERTISEMENT

'ಅವನಿ' ಕೊಂದವರಿಗೆ ಬಹುಮಾನ ನೀಡಿದ್ದ ಅಧಿಕಾರಿಗಳ ವಿರುದ್ಧದ ಪ್ರಕರಣ ರದ್ದು

ಪಿಟಿಐ
Published 26 ಫೆಬ್ರುವರಿ 2021, 12:56 IST
Last Updated 26 ಫೆಬ್ರುವರಿ 2021, 12:56 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಮಹಾರಾಷ್ಟ್ರದ ಯವತ್‌ಮಾಲ್‌ ಜಿಲ್ಲೆಯಲ್ಲಿ 2018ರಲ್ಲಿ ನರಭಕ್ಷಕ ಹುಲಿ ‘ಅವನಿ’ಯನ್ನು ಹತ್ಯೆ ಮಾಡಿದವರಿಗೆ ಬಹುಮಾನ ನೀಡಿದ್ದ ಮಹಾರಾಷ್ಟ್ರದ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ದಾಖಲಾಗಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಮುಕ್ತಾಯಗೊಳಿಸಿದೆ.

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ ‘ಅವನಿ’ಯನ್ನು ಹತ್ಯೆ ಮಾಡಲಾಗಿತ್ತು ಎನ್ನುವ ಮಾಹಿತಿ ತಿಳಿದ ನಂತರ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ರದ್ದುಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠವು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಸಂಗೀತಾ ಡೋಗ್ರಾ ಅವರ ಅರ್ಜಿಯನ್ನು ವಾಪಸ್ ಪಡೆಯಲು ಅನುಮತಿ ನೀಡಿದೆ.

ADVERTISEMENT

ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯ ವೇಳೆ ‘ನರಭಕ್ಷಕ ಹುಲಿಯನ್ನು ಕೊಲ್ಲುವ ನಿರ್ಧಾರವನ್ನು ಬಾಂಬೆ ಹೈಕೋರ್ಟ್ ಅನುಮೋದಿಸಿದೆ ಎಂದು ಮಹಾರಾಷ್ಟ್ರ ಸರ್ಕಾರವು ತನ್ನ ಉತ್ತರದಲ್ಲಿ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಉನ್ನತ ನ್ಯಾಯಾಲಯದ ಹಿಂದಿನ ತೀರ್ಪುಗಳನ್ನು ಪರಿಶೀಲಿಸಿದ ನಂತರ ಹುಲಿಯು ‘ನರಭಕ್ಷಕ’ ಆಗಿರಲಿಲ್ಲ ಎಂದು ಹೇಳಲು ಸಾಧ್ಯವಾಗದು. ಹುಲಿಯ ಹತ್ಯೆಯ ನಂತರ ಅಲ್ಲಿನ ಗ್ರಾಮಸ್ಥರು ಸಂಭ್ರಮಾಚರಣೆಯನ್ನೂ ಮಾಡಿದ್ದಾರೆ’ ಎಂದು ಸಂಗೀತಾ ಡೋಗ್ರಾ ಅವರಿಗೆ ನ್ಯಾಯಪೀಠವು ತಿಳಿಸಿದೆ.

ಖುದ್ದು ಹಾಜರಿದ್ದ ಸಂಗೀತಾ ಡೋಗ್ರಾ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸರಿಯಾದ ಮಾಹಿತಿಗಳನ್ನು ಒದಗಿಸಲಾಗಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ‘ಮುಂದಿನ ಬಾರಿ ನೀವು ಸರಿಯಾದ ಮಾಹಿತಿಯುಳ್ಳ ಪ್ರಕರಣವನ್ನು ತಂದಲ್ಲಿ ಮಾತ್ರ ನಾವು ನಿಮಗೆ ಸಹಾಯ ಮಾಡಬಹುದು. ಈ ಅರ್ಜಿಯನ್ನು ನೀವೇ ವಾಪಸ್ ಪಡೆಯುತ್ತಿರೋ ಅಥವಾ ನಾವೇ ಅರ್ಜಿಯನ್ನು ವಜಾಗೊಳಿಸಬೇಕೋ’ ಎಂದೂ ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ಸಂಗೀತಾ ಡೋಗ್ರಾ ಅರ್ಜಿಯನ್ನು ವಾಪಸ್ ಪಡೆಯುವುದಾಗಿ ತಿಳಿಸಿದರು.

‘ನರಭಕ್ಷಕ’ ಹುಲಿ ಅವನಿಯನ್ನು ಹತ್ಯೆ ಮಾಡಿದ ಕಾರಣಕ್ಕಾಗಿ ಮಹಾರಾಷ್ಟ್ರದ ಪ್ರಧಾನ ಕಾರ್ಯದರ್ಶಿ ವಿಕಾಸ್ ಖರ್ಗೆ ಮತ್ತು ಇತರ ಎಂಟು ಮಂದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಫೆ. 10ರಂದು ಪ್ರಕರಣ ದಾಖಲಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.