ADVERTISEMENT

ನ್ಯಾಯಾಧೀಶರ ವಿರುದ್ಧದ ದಾಳಿಗೆ ‘ಸುಪ್ರೀಂ’ ಖಂಡನೆ

ವಕೀಲರ ಮೇಲಿನ ಶಿಕ್ಷೆಯ ಮೇಲ್ಮನವಿ ಸ್ವೀಕರಿಸಲು ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 23 ಮೇ 2022, 15:37 IST
Last Updated 23 ಮೇ 2022, 15:37 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ‘ನ್ಯಾಯಾಧೀಶರ ವಿರುದ್ಧ ಆರೋಪ ಮಾಡುವುದು ದುರದೃಷ್ಟವಶಾತ್ ಈಗ ಹೊಸ ಫ್ಯಾಶನ್ ಆಗುತ್ತಿದೆ. ನ್ಯಾಯಾಧೀಶರು ಗಟ್ಟಿಗರಾದಷ್ಟೂ ಅವರ ವಿರುದ್ಧ ಆರೋಪಗಳು ಹೆಚ್ಚಾಗುತ್ತವೆ’ಎಂದು ಸುಪ್ರೀಂ ಕೋರ್ಟ್ ಸೋಮವಾರ ವಕೀಲರ ವಿರುದ್ಧ ಕಿಡಿಕಾರಿದೆ.

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥರಾದ ವಕೀಲ ಪಿ.ಆರ್. ಆದಿಕೇಶವನ್ ಅವರಿಗೆ ಎರಡು ವಾರಗಳ ಸಾದಾ ಜೈಲು ಶಿಕ್ಷೆ ಮತ್ತು ₹2 ಸಾವಿರ ದಂಡದ ಜೊತೆಗೆ ಒಂದು ವರ್ಷ ವಕಾಲತ್ತು ವಹಿಸದಂತೆ ಕಳೆದ ಮಾರ್ಚ್‌ನಲ್ಲಿ ಶಿಕ್ಷೆ ವಿಧಿಸಿದ ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧದ ಮನವಿ ಪರಿಗಣಿಸಲುನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಬೇಲಾ ಎಂ. ತ್ರಿವೇದಿ ಅವರಿದ್ದ ಪೀಠ ನಿರಾಕರಿಸಿತು. ಹೈಕೋರ್ಟ್‌ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲವೆಂದು ಖಡಕ್ಕಾಗಿ ಹೇಳಿತು.

‘ಜಿಲ್ಲಾ ನ್ಯಾಯಾಲಯಗಳಲ್ಲಿ ತಮ್ಮ ರಕ್ಷಣೆಗೆ ಪೊಲೀಸರು ಲಭ್ಯರಿಲ್ಲದೇ ಕೆಲವೊಮ್ಮೆ ಹಲ್ಲೆಗೂ ಒಳಗಾದ ನ್ಯಾಯಾಧೀಶರ ವಿರುದ್ಧ ವಕೀಲರು ವಿನಾಕಾರಣ ಆರೋಪ ಹೊರಿಸುವ ಚಾಳಿದೇಶದಾದ್ಯಂತ ನಡೆಯುತ್ತಿದೆ. ಇಂತಹ ಚಾಳಿ ಉತ್ತರ ಪ್ರದೇಶದಲ್ಲಿ ಹೆಚ್ಚಿದೆ. ಈಗ ಇದು ಬಾಂಬೆ ಹೈಕೋರ್ಟ್‌ ಮತ್ತು ಮದ್ರಾಸ್ ಹೈಕೋರ್ಟ್‌ನಲ್ಲಿಯೂ ವ್ಯಾಪಕವಾಗುತ್ತಿದೆ. ನೀವು (ವಕೀಲರು) ನ್ಯಾಯಾಧೀಶರ ಮೇಲೆ ಅನಗತ್ಯ ಆರೋಪ ಮಾಡಬಾರದು. ನೀವು ಸಹ ಕಾನೂನಿಗೆ ಅತೀತರಲ್ಲ’ ಎಂದು ಪೀಠ ಚಾಟಿ ಬೀಸಿತು.

ADVERTISEMENT

ಮದ್ರಾಸ್‌ ಹೈಕೋರ್ಟ್‌ ನ್ಯಾಯಾಧೀಶರ ಏಕ ಸದಸ್ಯ ಪೀಠವು, ಮೇಲ್ಮನವಿದಾರ ವಕೀಲರ ವಿರುದ್ಧ ಹೊರಡಿಸಿದ ಜಾಮೀನು ರಹಿತ ವಾರೆಂಟ್‌ ನೀಡಲು ಹೋದ ಪೊಲೀಸರಿಗೂ ಕರ್ತವ್ಯಕ್ಕೆ ನೂರಾರು ವಕೀಲರೊಂದಿಗೆ ಅಡ್ಡಿಪಡಿಸಿ, ನೋಟಿಸ್‌ ನೀಡದಂತೆ ತಡೆದಿದ್ದಾರೆ. ಇದನ್ನು ಸಾಬೀತುಪಡಿಸುವ ಸಿಸಿ ಟಿ.ವಿ ದೃಶ್ಯಗಳೂ ಇವೆ.ಮೇಲ್ಮನವಿದಾರರು ‘ಸಂಪೂರ್ಣ ಸರಿಪಡಿಸಲಾಗದ ವಕೀಲರ ವರ್ಗಕ್ಕೆ ಸೇರಿದವರು ಮತ್ತು ಅವರು ವಕೀಲ ವೃತ್ತಿಗೆ ಕಳಂಕ. ನ್ಯಾಯಾಂಗದಲ್ಲಿ ಅವರಿಗೆ ಯಾವುದೇ ಗೌರವವಿಲ್ಲ. ಅವರ ವಿರುದ್ಧದ ಶಿಕ್ಷೆಯನ್ನು ಅಸಮಂಜಸವೆಂದು ಪರಿಗಣಿಸಲಾಗದು’ ಎಂದು ಪೀಠ ಕಟುವಾಗಿ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.