ADVERTISEMENT

ಸಚಿವರಾಗಲು ವಿಶ್ವನಾಥ್‌ ಅನರ್ಹ: ತೀರ್ಪು ಎತ್ತಿಹಿಡಿದ ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 18:29 IST
Last Updated 28 ಜನವರಿ 2021, 18:29 IST
ಎ.ಎಚ್‌.ವಿಶ್ವನಾಥ್‌
ಎ.ಎಚ್‌.ವಿಶ್ವನಾಥ್‌   

ನವದೆಹಲಿ: ‘ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎ.ಎಚ್‌.ವಿಶ್ವನಾಥ್‌ ಸಚಿವರಾಗಲು ಅರ್ಹರಲ್ಲ’ ಎಂದಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್‌ ಗುರುವಾರ ಎತ್ತಿಹಿಡಿದಿದ್ದು, ವಿಶ್ವನಾಥ್‌ ಅವರ ಅರ್ಜಿಯನ್ನು ವಜಾ ಮಾಡಿದೆ.

‘ಸಚಿವರಾಗಿ ನೇಮಕವಾಗಲು ವಿಶ್ವನಾಥ್‌ ಅರ್ಹರಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಅವರ ನೇತೃತ್ವದ ಪೀಠವು ವಿಶ್ವನಾಥ್‌ ಅವರ ಪರ ವಕೀಲ ಗೋಪಾಲ್‌ ಶಂಕರ ನಾರಾಯಣನ್‌ ಅವರಿಗೆ ಹೇಳಿತು.

‘ಅವರು ಮರು ಆಯ್ಕೆಯಾಗದೆ, ವಿಧಾನಪರಿಷತ್‌ಗೆ ನಾಮನಿರ್ದೇಶನಗೊಂಡರೆ ಅನರ್ಹತೆಯು ಉಳಿದುಕೊಳ್ಳುತ್ತದೆ. ಅವರು ಆಯ್ಕೆ ಯಾಗಿ ಮತ್ತೆ ಬಂದರೆ, ಯಾವುದೇ ಅಡ್ಡಿ ಇಲ್ಲ. ಕೇವಲ ನಾಮನಿರ್ದೇಶನ ಗೊಂಡರೆ ಸಾಧ್ಯವಿಲ್ಲ. ಹೈಕೋರ್ಟ್‌ ಆದೇಶ ಸರಿಯಾಗಿದೆ ಮತ್ತು ಸಕಾರಣವಾಗಿದೆ’ ಎಂದು ನ್ಯಾಯ ಮೂರ್ತಿಗಳಾದ ಎ.ಎಸ್‌.ಬೋಪಣ್ಣ ಹಾಗೂ ವಿ.ರಾಮಸುಬ್ರಮಣಿಯನ್‌ ಅವರೂ ಇದ್ದ ಪೀಠವು ಹೇಳಿತು.

ADVERTISEMENT

ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಆಧರಿಸಿ ಹೈಕೋರ್ಟ್‌ ಈ ರೀತಿ ಆದೇಶ ನೀಡಿತ್ತು ಎಂದು ಶಂಕರನಾರಾಯಣನ್‌ ಅವರು ವಾದ ಮಂಡಿಸಲು ಮುಂದಾದಾಗ, ತಾಂತ್ರಿಕ ಆಧಾರದ ಮೇಲೆ ಅರ್ಜಿದಾರರಿಗೆ ಯಾವುದೇ ಪರಿಹಾರ ನೀಡಲು ಸಾಧ್ಯ ವಿಲ್ಲ ಎಂದ ಪೀಠವು ವಾದವನ್ನು ತಿರಸ್ಕರಿಸಿತು.

ರಾಜೀನಾಮೆ ನೀಡಿ, ಕರ್ನಾಟಕ ದಲ್ಲಿ ಆಡಳಿತದಲ್ಲಿದ್ದ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರ ಪತನ ಗೊಳ್ಳಲು ಕಾರಣವಾಗಿದ್ದ 17 ಶಾಸಕರ ಪೈಕಿ ವಿಶ್ವನಾಥ್‌ ಕೂಡಾ ಒಬ್ಬರಾಗಿದ್ದರು. ಎಲ್ಲ ಬಂಡಾಯ ಶಾಸಕರನ್ನು ಸಭಾಧ್ಯಕ್ಷರು ಅನರ್ಹಗೊಳಿಸಿದ್ದರು. 2019ರ ನವೆಂಬರ್‌ ನಲ್ಲಿ ಈ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ಸಭಾಧ್ಯಕ್ಷರ ಆದೇಶ ವನ್ನು ಎತ್ತಿ ಹಿಡಿದಿತ್ತು. ಆದರೆ, ಅನರ್ಹಗೊಂಡ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತೀರ್ಪು ನೀಡಿತ್ತು.

ಉಪಚುನಾವಣೆಯಲ್ಲಿ ಸೋತ ಬಳಿಕ ಸಚಿವರನ್ನಾಗಿ ಮಾಡುವ ಉದ್ದೇಶದಿಂದ ವಿಶ್ವನಾಥ್‌ ಅವರನ್ನು ಬಿಜೆಪಿಯು ಕಳೆದ ವರ್ಷ ಜುಲೈನಲ್ಲಿ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಿತ್ತು. ‘ನಾಮನಿರ್ದೇಶನದ ಹೊರತಾಗಿಯೂ,ಪಕ್ಷಾಂತರ ನಿಷೇಧ ಕಾಯ್ದೆಯಡಿ ವಿಶ್ವನಾಥ್‌ ಅವರ ಅನರ್ಹತೆಯು ಮುಂದುವರಿದಿದೆ’ ಎಂದು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಕಳೆದ ನವೆಂಬರ್‌ 30ರಂದು ಆದೇಶ ನೀಡಿತ್ತು.

‘ರಾಜಕೀಯವಾಗಿ ಮುಗಿಸಲು ಷಡ್ಯಂತ್ರ’

ಬೆಂಗಳೂರು: 'ನನ್ನನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ ಮೂರೂ ಪಕ್ಷಗಳಿಂದಲೂ ಷಡ್ಯಂತ್ರ ನಡೆದಿದೆ’ ಎಂದುವಿಧಾನ ಪರಿಷತ್ ಬಿಜೆಪಿ ಸದಸ್ಯ ಎ.ಎಚ್.ವಿಶ್ವನಾಥ್ ಕಿಡಿಕಾರಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನನ್ನನ್ನು ಪೊಲಿಟಿಕಲ್ ಶೂಟ್ ಮಾಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವರಾಗಲು ಅನರ್ಹರೆಂದು ಹೈಕೋರ್ಟ್ ವಿಭಾಗೀಯ ಪೀಠ ನೀಡಿದ್ದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ವಕೀಲರ ಜೊತೆ ಚರ್ಚಿಸಿ ಕಾನೂನು ಹೋರಾಟ ನಡೆಸುತ್ತೇನೆ’ ಎಂದರು.

‘ಯಾರ ವಿರುದ್ಧ ಬಂಡೆದ್ದು ಬಂದಿದ್ದೆವೋ ಇಂದು ಅವರ ಜತೆಯೇ (ಪರಿಷತ್ತಿ ನಲ್ಲಿ ಮೈತ್ರಿ ಬಳಿಕ) ಕುಳಿತುಕೊಳ್ಳುವಂತಾಗಿದೆ. ಇದೆಲ್ಲ ರಾಜಕೀಯದಲ್ಲಿ ಆಗುತ್ತಿ ರುತ್ತದೆ. ಇದು ಹೊಂದಾಣಿಕೆ ರಾಜಕೀಯ. ಹೊಂದಾಣಿಕೆ ಕಷ್ಟವಾದರೂ ಸಹಿಸಿಕೊಳ್ಳಬೇಕಾಗುತ್ತದೆ' ಎಂದರು. ‘ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಅವಕಾಶ ಇದ್ದರೂ ತಪ್ಪಿಸಿದರು. ಯಾರಿಗೇ ಆದರೂ ಉಪಕಾರ ಸ್ಮರಣೆ ಇರಬೇಕು. ನಮ್ಮ ತ್ಯಾಗವನ್ನು ಎಂದೂ ಮರೆಯಬಾರದು. ನಾನು ಇನ್ನೂ ಆರು ವರ್ಷ ಪರಿಷತ್ ಸದಸ್ಯನಾಗಿರುತ್ತೇನೆ. ಈ ವಿಧಾನಸಭೆಯ ಅವಧಿವರೆಗೆ ಮಾತ್ರ ನನಗೆ ತೊಡಕಾಗಬಹುದು. ಈ ಅವಧಿ ಮುಗಿದ ಬಳಿಕವಾದರೂ ಸಚಿವ ಆಗಬಹುದು ಅಲ್ವಾ’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.