ADVERTISEMENT

ಸಾಮಾಜಿಕವಾಗಿ ಭಾರತ ವಿಕಸಿತ: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2023, 23:30 IST
Last Updated 20 ಏಪ್ರಿಲ್ 2023, 23:30 IST
   

ನವದೆಹಲಿ: ಸಲಿಂಗಿಗಳ ವಿವಾಹವನ್ನು ಅನುಮೋದಿಸುವಷ್ಟರ ಮಟ್ಟಿಗೆ ಭಾರತವು ಸಾಮಾಜಿಕವಾಗಿ ಹಾಗೂ ಸಾಂವಿಧಾನಿಕವಾಗಿ ವಿಕಸನಗೊಂಡಿದೆ ಎಂದು ಸುಪ್ರೀಂಕೋರ್ಟ್‌ ಗುರುವಾರ ಹೇಳಿದೆ.

ಸಲಿಂಗಕಾಮ ಅಪರಾಧವಲ್ಲ ಎಂದು ಹೇಳಿದ ನಂತರ, ಈಗ ಸಲಿಂಗಿಗಳ ಮದುವೆಯನ್ನು ಒಪ್ಪಿಕೊಳ್ಳುವ ನಿಟ್ಟಿನಲ್ಲಿ ವಿಚಾರ ಮಾಡುವಂತಹ ಮಧ್ಯಂತರ ಹಂತವನ್ನು ಭಾರತ ತಲುಪಿದೆ ಎಂದೂ ಅಭಿಪ್ರಾಯಪಟ್ಟಿದೆ.

ಸಲಿಂಗ ಮದುವೆಗೆ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ, ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ, ಭಿನ್ನಲಿಂಗ ದಂಪತಿ ಎದುರಿಸುತ್ತಿರುವ ಸಮಸ್ಯೆಗಳನ್ನೂ ಪ್ರಸ್ತಾಪಿಸಿತು.

ADVERTISEMENT

ನ್ಯಾಯಮೂರ್ತಿಗಳಾದ ಎಸ್‌.ಕೆ.ಕೌಲ್‌, ಎಸ್‌.ರವೀಂದ್ರ ಭಟ್, ಹಿಮಾ ಕೊಹ್ಲಿ ಹಾಗೂ ಪಿ.ಎಸ್‌.ನರಸಿಂಹ ಈ ಪೀಠದಲ್ಲಿದ್ದಾರೆ.

‘ಭಿನ್ನಲಿಂಗ ದಂಪತಿಯೂ ಕೌಟುಂಬಿಕ ಹಿಂಸೆ ಎದುರಿಸುತ್ತಿರುವ ಬಗ್ಗೆ ಏನು ಹೇಳುತ್ತೀರಿ. ಅದರಲ್ಲೂ, ಅವರ ಮಕ್ಕಳ ಮೇಲೆ ಇದು ಬೀರುವ ಪರಿಣಾಮ ಏನು? ಇಂಥ ಕುಟುಂಬಗಳಲ್ಲಿ, ಕುಡಿದ ಅಮಲಿನಲ್ಲಿ ಮನೆಗೆ ಬರುವ ತಂದೆ ಇದ್ದರೆ ಹಾಗೂ ಮದ್ಯ ಕುಡಿಯಲು ಹಣ ನೀಡುವಂತೆ ತಾಯಿಯನ್ನು ಪೀಡಿಸಿ, ಆಕೆಯನ್ನು ಥಳಿಸುತ್ತಿರುವ ಬಗ್ಗೆ ಏನು ಹೇಳುತ್ತೀರಿ’ ಎಂದು ಸಿಜೆಐ ಪ್ರಶ್ನಿಸಿದರು.

ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಸುಪ್ರಿಯೊ ಎಂಬುವವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಪೀಠವು ಈ ಮೌಖಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.

‘ಸಲಿಂಗ ಕಾಮವನ್ನು ಅಪರಾಧವಲ್ಲ ಎಂದು ಒಪ್ಪಿಕೊಂಡ ನಂತರ, ಸಲಿಂಗಿಗಳ ನಡುವಿನ ಸಂಬಂಧಕ್ಕೆ ಮಾತ್ರವಲ್ಲದೇ, ಅವರು ಸ್ಥಿರವಾದ ಸಂಬಂಧ ಹೊಂದಬಹುದು ಎಂಬುದಕ್ಕೆ ಕೂಡ ಸೂಚ್ಯವಾಗಿ ಮಾನ್ಯತೆ ನೀಡಿದಂತಾಗುತ್ತದೆ’ ಎಂದು ಚಂದ್ರಚೂಡ್‌ ಹೇಳಿದರು.

‘1954ರಲ್ಲಿ ರಚಿಸಿದ ವಿಶೇಷ ವಿವಾಹ ಕಾಯ್ದೆಯ ಉದ್ದೇಶವು ಕೂಡ, ಸಲಿಂಗ ವಿವಾಹಕ್ಕೆ ಒಳಗಾಗುವ ವ್ಯಕ್ತಿ
ಗಳನ್ನು ತನ್ನ ವ್ಯಾಪ್ತಿಗೆ ತರಬೇಕು ಎಂಬುದಾಗಿತ್ತು’ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿತು.

ವಾದ ಮಂಡನೆಗೆ ಸಮಯ ನಿಗದಿ ಅಗತ್ಯ: ಸಾಂವಿಧಾನಿಕ ಪೀಠದ ಮುಂದೆ ಬರುವ ಅರ್ಜಿಗಳ ಸಂಖ್ಯೆ ದೊಡ್ಡದು. ಹೀಗಾಗಿ, ವಾದ ಮಂಡನೆಗೆ ಸಮಯ ನಿಗದಿ ಮಾಡದ ಹೊರತು ಅರ್ಜಿಗಳನ್ನು ವಿಚಾರಣಾ ಪಟ್ಟಿಗೆ ಸೇರಿಸುವುದು ಅಸಾಧ್ಯ ಎಂದು ಪೀಠ ಹೇಳಿದೆ.

ಸಲಿಂಗ ಮದುವೆಗೆ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ
ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಈ ಅಭಿಪ್ರಾಯ ವ್ಯಕ್ತಪಡಿಸಿದರು.

‘ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿರುವ ಕಾರಣ ನ್ಯಾಯಾಲಯಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಇದೇ ಕಾರಣಕ್ಕಾಗಿಯೇ ಈ ಹಿಂದಿನ ಮುಖ್ಯ ನ್ಯಾಯಮೂರ್ತಿಗಳು ಸಾಂವಿಧಾನಿಕ ಪೀಠಗಳನ್ನು ರಚಿಸಿರಲಿಲ್ಲ’ ಎಂದರು.

ಅರ್ಜಿಗಳ ವಿಚಾರಣೆ ಮೂರನೇ ದಿನವೂ ಮುಂದುವರಿಯಿತು.

‘ಕೆಲ ಕೋರ್ಟ್‌ಗಳಲ್ಲಿ ವಾದ ಮಂಡನೆ 30 ನಿಮಿಷಗಳಲ್ಲಿ ಮುಗಿದು ಹೋಗುತ್ತದೆ. ಅಂಥದ್ದರಲ್ಲಿ ನಿಮಗೆ (ಅರ್ಜಿದಾರರ ಪರ ವಕೀಲರಿಗೆ) ಮೂರು ದಿನಗಳನ್ನು ನೀಡಲಾಗಿದೆ. ಇಷ್ಟು ಸಮಯ ಸಾಕು ಎನಿಸುತ್ತದೆ’ ಎಂದು ಹೇಳಿದರು.

ಇದೇ ವಿಷಯವಾಗಿ ಕೆಲ ಸಮಯದ ವರೆಗೆ ಚರ್ಚೆಯೂ ನಡೆಯಿತು. ನಂತರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡಿಸಿದರು. ಏ. 24ರಂದು ವಾದ ಮಂಡನೆ ಪೂರ್ಣಗೊಳಿಸುವಂತೆ ಸಿಂಘ್ವಿ ಅವರಿಗೆ ನ್ಯಾಯಪೀಠ ಸೂಚಿಸಿತು.

‘ಗಂಡು ಮಗು ಇರಲೇಬೇಕೆಂಬ ಕಲ್ಪನೆ ದೂರವಾಗಿದೆ’

‘ಗಂಡು ಮಗು ಹೊಂದಿರಲೇಬೇಕು ಎಂಬ ಕಲ್ಪನೆಯಿಂದ ಜನರು ಹೊರಬಂದಿದ್ದಾರೆ. ಇದು ಶಿಕ್ಷಣದ ಪ್ರಭಾವ’ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಸಲಿಂಗ ಮದುವೆಗೆ ಮಾನ್ಯತೆ ನೀಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ವೇಳೆ, ಡಿ.ವೈ.ಚಂದ್ರಚೂಡ್‌ ಈ ಅಭಿಪ್ರಾಯ ವ್ಯಕ್ತಪಡಿಸಿದರು.

‘ಆಧುನಿಕ ಕಾಲದ ಒತ್ತಡಗಳಿಂದಾಗಿ ಭಿನ್ನಲಿಂಗಿ ದಂಪತಿ ಕೂಡ ಈಗ ಮಕ್ಕಳನ್ನು ಹೊಂದಿಲ್ಲ ಅಥವಾ ಒಂದು ಮಗು ಹೊಂದಿರುತ್ತಾರೆ. ಇದು ಜನಸಂಖ್ಯಾ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಹಿರಿಯರ ಸಂಖ್ಯೆಯೇ ಹೆಚ್ಚುತ್ತಿದೆ. ಇಂಥ ವಿದ್ಯಮಾನವನ್ನು ಚೀನಾದಲ್ಲಿ ಕಾಣಬಹುದು’ ಎಂದರು.

ಅರ್ಜಿದಾರರೊಬ್ಬರ ಪರ ವಕೀಲ ಕೆ.ವಿ.ವಿಶ್ವನಾಥನ್‌ ವಾದ ಮಂಡಿಸಿದರು. ನಂತರ, ನ್ಯಾಯಪೀಠವು ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.