ADVERTISEMENT

ರಾಜೀನಾಮೆ, ಅನರ್ಹತೆ ಯಥಾಸ್ಥಿತಿಗೆ ‘ಸುಪ್ರೀಂ’ ಆದೇಶ

‘ಸಾಂವಿಧಾನಿಕ ವಿಷಯಗಳು ಅಡಕ; ಚರ್ಚೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 20:00 IST
Last Updated 12 ಜುಲೈ 2019, 20:00 IST
   

ನವದೆಹಲಿ: ‘ಅತೃಪ್ತ ಶಾಸಕರ ರಾಜೀನಾಮೆ ಮತ್ತು ಅನರ್ಹತೆಗೆ ಸಂಬಂಧಿಸಿದ ಪ್ರಕರಣದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು’ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಆದೇಶ ನೀಡಿದೆ.

ಸ್ಪೀಕರ್‌ ಕಾರ್ಯ ವ್ಯಾಪ್ತಿಯ ಪರಿಶೀಲನೆ ಸೇರಿದಂತೆ ಪ್ರಕರಣದಲ್ಲಿ ಅಡಕವಾಗಿರುವ ಸಾಂವಿಧಾನಿಕ ವಿಷಯಗಳ ಬಗ್ಗೆ ವಿಸ್ತೃತ ವಿಚಾರಣೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ತ್ರಿಸದಸ್ಯ ಪೀಠವು, ಜುಲೈ 16ಕ್ಕೆ ವಿಚಾರಣೆ ಮುಂದೂಡಿತು.

‘ಸ್ಪೀಕರ್ ಸಲ್ಲಿಸಿರುವ ಅರ್ಜಿಯಲ್ಲಿ ಸಂವಿಧಾನದ 190 ಮತ್ತು 361ನೇ ವಿಧಿಗಳ ಪ್ರಸ್ತಾಪ ಇದೆ. ರಾಜೀನಾಮೆ ಕುರಿತು ಶೀಘ್ರವೇ ತೀರ್ಮಾನ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ಅವರಿಗೆ ನಿರ್ದೇಶನ ನೀಡಬಹುದೇ ಎಂಬ ಪ್ರಶ್ನೆಯೂ ನಮ್ಮೆದುರು ಇದೆ. ಕಾನೂನಾತ್ಮಕ ಅಂಶಗಳ ಕುರಿತು ಪರಿಶೀಲನೆ ಅಗತ್ಯ ಇರುವುದರಿಂದ ಯಥಾಸ್ಥಿತಿಗೆ ಆದೇಶಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ರಾಜೀನಾಮೆ ಸ್ವೀಕರಿಸುವಂತೆ ಕರ್ನಾಟಕದ ವಿಧಾನಸಭೆಯ ಸ್ಪೀಕರ್‌ಗೆ ನಿರ್ದೇಶನ ನೀಡುವಂತೆ ಕೋರಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅತೃಪ್ತ ಶಾಸಕರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಗುರುವಾರ ಆದೇಶ ನೀಡಿದ್ದ ಪೀಠವು, ರಾತ್ರಿಯೊಳಗೆ ಶಾಸಕರ ವಿಚಾರಣೆ ನಡೆಸಿ ನಿರ್ಧಾರ ಪ್ರಕಟಿಸುವಂತೆ ಗಡುವು ವಿಧಿಸಿತ್ತು.

ಆದರೆ, ಈ ಆದೇಶ ಹಿಂದಕ್ಕೆ ಪಡೆಯುವಂತೆ ಕೋರಿ ಸ್ಪೀಕರ್‌ ಸಲ್ಲಿಸಿದ್ದ ಮೇಲ್ಮನವಿಯ ತ್ವರಿತ ವಿಚಾರಣೆ ನಡೆಸದೆ, ‘ಈಗಾಗಲೇ ಆದೇಶ ನೀಡಲಾಗಿದ್ದು, ಶಾಸಕರ ಅರ್ಜಿಯೊಂದಿಗೇ ವಿಚಾರಣೆ ನಡೆಸಲಾಗುವುದು’ ಎಂದು ನ್ಯಾಯಪೀಠ ಹೇಳಿತ್ತು.

ಶುಕ್ರವಾರದ ವಿಚಾರಣೆಯ ವೇಳೆ ಶಾಸಕರ ಪರ ವಾದ ಮಂಡಿಸಿದ ವಕೀಲ ಮುಕುಲ್‌ ರೋಹಟ್ಗಿ, ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದ್ದರೂ ಯಾವುದೇ ನಿರ್ಧಾರ ಕೈಗೊಳ್ಳದ ಸ್ಪೀಕರ್‌ಗೆ ಸೋಮವಾರದೊಳಗೆ ನಿರ್ಧಾರ ಪ್ರಕಟಿಸುವಂತೆ ಆದೇಶಿಸಬಹುದು. ಒಂದೊಮ್ಮೆ ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬಹುದು ಎಂದರು.

ರಾಜೀನಾಮೆಯು ಸ್ವಯಂ ಪ್ರೇರಿತವೇ, ಅಲ್ಲವೇ ಎಂಬುದನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕಿರುವ ಸ್ಪೀಕರ್‌, ಕೆಲವು ಶಾಸಕರ ಅನರ್ಹತೆ ಅರ್ಜಿಯ ವಿಚಾರಣೆಯ ನೆಪ ಹೇಳುತ್ತಿದ್ದಾರೆ. ಈ ಮೂಲಕ ಅವರು ಎಲ್ಲ ಶಾಸಕರನ್ನು ಅನರ್ಹಗೊಳಿಸುವ ಹುನ್ನಾರ ನಡೆಸಿದ್ದಾರೆ ಎಂದು ಅವರು ದೂರಿದರು.

ಅಲ್ಲದೆ, ಈ ಹಿಂದೆ ಒಬ್ಬ ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳದೆ ರಾಜೀನಾಮೆ ಸ್ವೀಕರಿಸಿದ್ದಾರೆ ಎಂದು ಅವರು ವಿವರಿಸಿದರು.

ಶಾಸಕರೊಂದಿಗಿನ ಭೇಟಿ ನಂತರ ಪತ್ರಿಕಾಗೋಷ್ಠಿ ನಡೆಸಿರುವ ಸ್ಪೀಕರ್‌, ‘ಶಾಸಕರು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದೇಕೆ’ ಎಂದು ಪ್ರಶ್ನಿಸಿದ್ದಲ್ಲದೆ, ‘ನನಗೆ ಆದೇಶ ನೀಡಲು ಸುಪ್ರೀಂ ಕೋರ್ಟ್‌ಗೆ ಅಧಿಕಾರವಿಲ್ಲ’ ಎಂದೂ ನುಡಿದಿದ್ದಾಗಿ ರೋಹಟ್ಗಿ ಹೇಳಿದರು.

ಸಂವಿಧಾನದ 190ನೇ ವಿಧಿ ಅಡಿ ಸ್ಪೀಕರ್‌ ನಿರ್ವಹಿಸಬೇಕಿರುವ ಕರ್ತವ್ಯಗಳ ಪಟ್ಟಿಯನ್ನು ನ್ಯಾಯಪೀಠದೆದುರು ಓದಿ ಹೇಳಿದ ಸ್ಪೀಕರ್ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ, ರಾಜೀನಾಮೆಯನ್ನು ಖುದ್ದಾಗಿ ಸ್ವೀಕರಿಸಿ ಪರಿಶೀಲನೆ ನಡೆಸಬೇಕೆಂಬ ನಿಯಮ ಇರುವುದರಿಂದ ಸ್ಪೀಕರ್‌ ಅದಕ್ಕೆ ಬದ್ಧರಾಗಿದ್ದಾರೆ ಎಂದರು.

ಅಲ್ಲದೆ, ವಿಧಾನಸಭೆಯ ನಿಯಮಗಳ ಅನ್ವಯಶಾಸಕರ ವಿರುದ್ಧ ಸಲ್ಲಿಕೆಯಾದ ಅನರ್ಹತೆಯ ಪ್ರಕರಣವನ್ನು ಮೊದಲು ಇತ್ಯರ್ಥಪಡಿಸುವುದು ಸ್ಪೀಕರ್‌ ಅವರ ಸಾಂವಿಧಾನಿಕ ಬದ್ಧತೆಯಾಗಿದೆ ಎಂದು ಅವರು ಹೇಳಿದರು.

ರಾಜೀನಾಮೆ ಸಲ್ಲಿಸಲು ಬಂದಾಗ ಸ್ಪೀಕರ್‌ ತಮ್ಮ ಕಚೇರಿಯಲ್ಲಿರದೆ, ಬೇರೆಡೆ ತೆರಳಿದ್ದರು ಎಂದು ದೂರಲಾಗಿದೆ. ಆದರೆ, ಗುರುವಾರ ಸಂಜೆ ಸ್ಪೀಕರ್‌ ಜೊತೆಗಿನ ಭೇಟಿಯ ಸಂದರ್ಭ ಇದೇ ಶಾಸಕರು ಈ ಆರೋಪ ನಿರಾಕರಿಸಿದ್ದಾರೆ. ಈ ಪ್ರಕ್ರಿಯೆಯನ್ನು ಚಿತ್ರೀಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

‘ಕೆಲವು ಶಾಸಕರು ಅನರ್ಹತೆಯ ಭಯದಿಂದ ರಾಜೀನಾಮೆ ಸಲ್ಲಿಸಿದ್ದಾರೆ. ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಕಾಲಮಿತಿಯೊಳಗೆ ಸ್ಪೀಕರ್‌ ತೀರ್ಮಾನ ಕೈಗೊಳ್ಳುವಂತೆ ನಿರ್ದೇಶನ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆಯೇ ಪ್ರಕರಣವೊಂದರಲ್ಲಿ ತೀರ್ಪು ನೀಡಿದೆ ಎಂದು ಅವರು ತಿಳಿಸಿದರು.

ರಾಜೀನಾಮೆ ನೀಡಿದವರು ಹೊಸ ಸರ್ಕಾರದಲ್ಲಿ ಸಚಿವರಾಗಿ ನೇಮಕಗೊಂಡರೂ ಅಚ್ಚರಿ ಪಡಬೇಕಿಲ್ಲ. ಹಾಗಾಗಿ ರಾಜೀನಾಮೆ ಹಿಂದೆ ಸಹಜ ಕಾರಣಗಳೇನು ಎಂಬುದನ್ನು ಅರಿತು ತೀರ್ಮಾನ ಕೈಗೊಳ್ಳಲು ಕಾಲಾವಕಾಶದ ಅಗತ್ಯವಿದೆ ಎಂದು ಸಿಂಘ್ವಿ ವಾದಿಸಿದರು.

ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂದು ನಂಬಿಸಲಾಗುತ್ತಿದೆ. ರಾಜೀನಾಮೆ ಪ್ರಕರಣದ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್‌ ಮೊರೆ ಹೋಗಲಾಗಿದೆ. ಹರಿಯಾಣದಲ್ಲಿ ಶಾಸಕರೊಬ್ಬರ ರಾಜೀನಾಮೆ ಕುರಿತು ಇತ್ಯರ್ಥಪಡಿಸಲು ಈ ಹಿಂದೆ ಸುಪ್ರೀಂ ಕೋರ್ಟ್‌ 4 ತಿಂಗಳ ಕಾಲಾವಕಾಶ ನೀಡಿತ್ತು ಎಂದು ಮುಖ್ಯಮಂತ್ರಿ ಪರ ವಾದ ಮಂಡಿಸಿದ ವಕೀಲ ರಾಜೀವ್‌ ಧವನ್‌ ಒತ್ತಿ ಹೇಳಿದರು.

ಐಎಂಎ ಹಗರಣ, ಜಿಂದಾಲ್‌ಗೆ ಭೂಮಿ ನೀಡಿದ್ದರಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ಒಬ್ಬರು ಹೇಳಿದರೆ, ದುರಾಡಳಿತದಿಂದ ಬೇಸತ್ತು ರಾಜೀನಾಮೆ ನೀಡುತ್ತಿರುವುದಾಗಿ ಇನ್ನೊಬ್ಬರು ಸಬೂಬು ನೀಡುತ್ತಿದ್ದಾರೆ. ವಾಸ್ತವದಲ್ಲಿ, ರಾಜೀನಾಮೆ ನೀಡಿರುವ ಒಬ್ಬರು ಹಗರಣವೊಂದರ ಆರೋಪಿಯಾಗಿದ್ದಾರೆ ಎಂದು ಧವನ್‌ ತಿಳಿಸಿದರು.

ಇದು ರಾಜಕೀಯ ಪ್ರೇರಿತ ಅರ್ಜಿ ಎಂಬುದು ಸ್ಪಷ್ಟ. ಸ್ಪೀಕರ್‌ ಮತ್ತು ಮುಖ್ಯಮಂತ್ರಿ ವಿರುದ್ಧ ದುರುದ್ದೇಶದಿಂದಲೇ ಇಲ್ಲಸಲ್ಲದ ಆರೋಪಗಳನ್ನು ಹೊರಿಸಲಾಗಿದೆ ಎಂದು ಅವರು ವಾದಿಸಿದರು.

ನ್ಯಾಯಮೂರ್ತಿಗಳಾದ ದೀಪಕ್‌ ಗುಪ್ತಾ ಹಾಗೂ ಅನಿರುದ್ಧ ಬೋಸ್‌ ಅವರನ್ನು ಒಳಗೊಂಡ ಪೀಠವು, 45 ನಿಮಷ ನಡೆದ ವಿಚಾರಣೆಯ ವೇಳೆ ಸಾವಧಾನದಿಂದಲೇ ವಾದ ಆಲಿಸಿತಲ್ಲದೆ, ಅರ್ಜಿದಾರರು ಮತ್ತು ಪ್ರತಿವಾದಿಗಳ ಪರ ವಕೀಲರ ವಾದ ಮಂಡನೆಗೆ ಸಮಾನ ಅವಕಾಶ ನೀಡಿತು.

‘ನಮ್ಮ ಅಧಿಕಾರ ವ್ಯಾಪ್ತಿಯನ್ನು ಸ್ಪೀಕರ್‌ ಪ್ರಶ್ನಿಸಿದ್ದಾರೆಯೇ’ ಎಂದು ವಿಚಾರಣೆಯ ಮಧ್ಯೆ ನ್ಯಾಯಮೂರ್ತಿ ಗೊಗೊಯಿ, ಸಿಂಘ್ವಿ ಅವರನ್ನು ಪ್ರಶ್ನಿಸಿದರು. ‘ಸ್ಪೀಕರ್‌ ಕಾರ್ಯವ್ಯಾಪ್ತಿ ಕುರಿತ ಸುಪ್ರೀಂ ಕೋರ್ಟ್‌ನ ಅಧಿಕಾರ ಮತ್ತು ಆದೇಶದ ಬಗ್ಗೆ ನಮ್ಮ ವಿರೋಧವಿಲ್ಲ’ ಎಂದು ಸಿಂಘ್ವಿ ಒಪ್ಪಿಕೊಂಡರು.

‘ಸುಪ್ರೀಂ’ಗೆ ಸ್ಪೀಕರ್‌ ಹೇಳಿಕೆ

ಗುರುವಾರ ಶಾಸಕರನ್ನು ಭೇಟಿ ಮಾಡಿದ ಪ್ರಕ್ರಿಯೆ ಕುರಿತು ಸುಪ್ರೀಂ ಕೋರ್ಟ್‌ಗೆ ಹೇಳಿಕೆ ಸಲ್ಲಿಸಿರುವ ಸ್ಪೀಕರ್‌ ಕೆ.ಆರ್‌. ರಮೇಶ್‌ಕುಮಾರ್‌, ಶಾಸಕರು ಸಲ್ಲಿಸಿರುವ ರಾಜೀನಾಮೆ ಅರ್ಜಿಗಳು ಹಾಗೂ ಸಂವಿಧಾನದ 10ನೇ ಪರಿಚ್ಛೇದ (ಪಕ್ಷಾಂತರ)ದ ಅಡಿ ಸಲ್ಲಿಕೆಯಾದ ಅರ್ಜಿಗಳ ಇತ್ಯರ್ಥಪಡಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಶಾಸಕರು ಸಲ್ಲಿಸಿರುವ ರಿಟ್‌ ಅರ್ಜಿಯು ಪ್ರಮಾದದಿಂದ ಕೂಡಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.