ADVERTISEMENT

ಪಿಒಎಸ್‌ಎಚ್ ಕಾಯ್ದೆ ವ್ಯಾಪ್ತಿಗೆ ರಾಜಕೀಯ ಪಕ್ಷಗಳು: ‘ಸುಪ್ರೀಂ’ನಿಂದ ಅರ್ಜಿ ವಜಾ

ಕೇರಳ ಹೈಕೋರ್ಟ್‌ ತೀರ್ಪು ಸಲ್ಲಿಕೆಯಾಗಿದ್ದ ಮೇಲ್ಕನವಿ

ಪಿಟಿಐ
Published 16 ಸೆಪ್ಟೆಂಬರ್ 2025, 13:16 IST
Last Updated 16 ಸೆಪ್ಟೆಂಬರ್ 2025, 13:16 IST
–
   

ನವದೆಹಲಿ: ನೋಂದಾಯಿತ ರಾಜಕೀಯ ಪಕ್ಷಗಳನ್ನು ‘ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ(ತಡೆಗಟ್ಟುವುದು, ನಿಷೇಧ ಹಾಗೂ ಪರಿಹಾರ) ಕಾಯ್ದೆ–2013’ರ (ಪಿಒಎಸ್‌ಎಚ್‌ ಕಾಯ್ದೆ) ವ್ಯಾಪ್ತಿಗೆ ತರಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

‘ರಾಜಕೀಯ ಪಕ್ಷಗಳನ್ನು ಪಿಒಎಸ್‌ಎಚ್‌ ಕಾಯ್ದೆ ವ್ಯಾಪ್ತಿಗೆ ತರುವುದರಿಂದ ಹೊಸ ಸಮಸ್ಯೆಗಳು ಉದ್ಭವಿಸುತ್ತವೆ. ದುರ್ಬಳಕೆ ಹಾಗೂ ಬ್ಲ್ಯಾಕ್‌ಮೇಲ್‌ ಮಾಡುವುದಕ್ಕೆ ಈ ಕಾಯ್ದೆ ಒಂದು ಸಾಧನವಾಗಲಿದೆ’ ಎಂದು ಮೂವರು ಸದಸ್ಯರು ಇದ್ದ ನ್ಯಾಯಪೀಠ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ನೇತೃತ್ವದ ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಕೆ.ವಿನೋದಚಂದ್ರನ್ ಹಾಗೂ ಎ.ಎಸ್‌.ಚಂದೂರ್ಕರ್ ಇದ್ದಾರೆ.

ADVERTISEMENT

ರಾಜಕೀಯ ಪಕ್ಷಗಳಲ್ಲಿ ಉದ್ಯೋಗದಾತ ಮತ್ತು ನೌಕರ ಎಂಬ ಸಂಬಂಧವೇ ಇರುವುದಿಲ್ಲ. ಹೀಗಾಗಿ, ಆಂತರಿಕ ದೂರು ಸಮಿತಿಗಳನ್ನು (ಐಸಿಸಿ) ರಚಿಸಬೇಕು ಎಂಬುದು ರಾಜಕೀಯ ಪಕ್ಷಗಳಿಗೆ ಕಡ್ಡಾಯವಾಗುದಿಲ್ಲ ಎಂದು ಕೇರಳ ಹೈಕೋರ್ಟ್‌ 2022ರಲ್ಲಿ ತೀರ್ಪು ನೀಡಿತ್ತು.

ಈ ತೀರ್ಪು ಪ್ರಶ್ನಿಸಿ ಯೋಗಮಾಯಾ ಎಂ.ಜಿ. ಅವರು ಹಿರಿಯ ವಕೀಲೆ ಶೋಭಾ ಗುಪ್ತಾ ಮೂಲಕ ಮೇಲ್ಮನವಿ ಸಲ್ಲಿಸಿದ್ದರು.

‘ಎಲ್ಲ ರಾಜಕೀಯ ಪಕ್ಷಗಳು ಮಹಿಳಾ ಸದಸ್ಯರನ್ನು ಹೊಂದಿವೆ. ಸಿಪಿಎಂ ಮಾತ್ರ ಆಂತರಿಕ ದೂರು ಸಮಿತಿ ಹೊಂದಿದೆ’ ಎಂದು ಯೋಗಮಾಯಾ ಅವರು ಅರ್ಜಿಯಲ್ಲಿ ವಿವರಿಸಿದ್ದರು.

ವಿಚಾರಣೆ ವೇಳೆ, ‘ರಾಜಕೀಯಗಳು ಕೂಡ ಉದ್ಯೋಗ ಸ್ಥಳಗಳು ಎಂದು ನೀವು ಹೇಗೆ ಸಮೀಕರಿಸುತ್ತೀರಿ’ ಎಂದು ಪೀಠವು ಅರ್ಜಿದಾರರನ್ನು ಪ್ರಶ್ನಿಸಿದೆ.

‘ಒಬ್ಬ ವ್ಯಕ್ತಿ ಒಂದು ರಾಜಕೀಯ ಪಕ್ಷ ಸೇರಿದಾಗ, ಅದು ಉದ್ಯೋಗ ಎಂದು ಪರಿಗಣಿಸಲಾಗುವುದಿಲ್ಲ. ಸ್ವ ಇಚ್ಛೆಯಿಂದ ಜನರು ರಾಜಕೀಯ ಪಕ್ಷಗಳನ್ನು ಸೇರುತ್ತಾರೆ ಹಾಗೂ ಇಲ್ಲಿ ಯಾವುದೇ ಗೌರವ ಸಂಭಾವನೆಯೂ ಇರುವುದಿಲ್ಲ’ ಎಂದ ಪೀಠ, ‘ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳ ವಿರುದ್ಧದ ಕಾಯ್ದೆಯು ರಾಜಕೀಯ ಪಕ್ಷಗಳನ್ನು ಒಳಗೊಳ್ಳುವುದು ಹೇಗೆ ಸಾಧ್ಯ’ ಎಂದೂ ಪ್ರಶ್ನಿಸಿದೆ.

ಇಂಥಹುದೇ ನಿವೇದನೆ ಒಳಗೊಂಡಿದ್ದ ಪಿಐಎಲ್‌ ಅನ್ನು ಈ ಹಿಂದೆಯೂ ಸುಪ್ರೀಂ ಕೋರ್ಟ್‌ ವಜಾಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.