ಬೆಂಗಳೂರು: ಬಡ್ತಿ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ಬುಧವಾರ ನೀಡಿದ ತೀರ್ಪಿಗಿಂತ ಬಿ.ಕೆ. ಪವಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಅ. 3ರಂದು ನೀಡಲಿರುವ ತೀರ್ಪು ರಾಜ್ಯ ಸರ್ಕಾರದ ಪಾಲಿಗೆ ಮಹತ್ವದ್ದಾಗಿದೆ.
‘ಬಡ್ತಿಯಲ್ಲೂ ಮೀಸಲಾತಿ ನೀಡುವುದು ರಾಜ್ಯ ಸರ್ಕಾರದ ವಿವೇಚನೆಗೆ ಒಳಪಟ್ಟ ವಿಚಾರ’ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ. ಆದರೆ, ‘ಬಡ್ತಿ ಮೀಸಲು ಕಾಯ್ದೆ–2002’ ಅನ್ನು ರದ್ದುಪಡಿಸಿ 2017ರ ಫೆ. 9ರಂದು ನೀಡಿದ್ದ ತೀರ್ಪು ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ವಾರ ಬರಲಿರುವ ತೀರ್ಪಿಗಾಗಿ ಸರ್ಕಾರ ಕಾಯುತ್ತಿದೆ.
ಬಡ್ತಿಯಲ್ಲೂ ಮೀಸಲಾತಿ ಅನುಸರಿಸುವ ವೇಳೆ ಮೂರು ಅಂಶಗಳ (ಪ್ರಾತಿನಿಧ್ಯದ ಕೊರತೆ, ಹಿಂದುಳಿದಿರುವಿಕೆ, ಒಟ್ಟಾರೆ ದಕ್ಷತೆ) ಮಾಹಿತಿ ಕಲೆಹಾಕಬೇಕು ಎಂದು ಸುಪ್ರೀಂ ಕೋರ್ಟ್ ಈ ಹಿಂದೆಯೇ ಹೇಳಿತ್ತು.
ಫೆ. 9ರಂದು ನೀಡಿದ್ದ ತೀರ್ಪು ಜಾರಿಯಿಂದ ಹಿಂಬಡ್ತಿ ಭೀತಿಯಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನೌಕರರ ಹಿತ ಕಾಪಾಡಲು ರಾಜ್ಯ ಸರ್ಕಾರ, ಈ ಮೂರೂ ಅಂಶಗಳನ್ನು ಉಲ್ಲೇಖಿಸಿ ‘ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ ಕಾಯ್ದೆ’ ಜಾರಿಗೆ ತಂದಿದೆ.
ಕೋರ್ಟ್ ನೀಡಿದ ತೀರ್ಪು ಪಾಲನೆ ಆಗಿಲ್ಲ ಎಂದು ಸಲ್ಲಿಕೆಯಾದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ (ಅ. 3) ವೇಳೆ ಕಾಯ್ದೆಯ ಸಿಂಧುತ್ವ ಚರ್ಚೆಗೆ ಬರುವ ಸಾಧ್ಯತೆ ಇದೆ. ಹಿಂದುಳಿಯುವಿಕೆ ಕಾರಣಕ್ಕೆ ಬಡ್ತಿಯಲ್ಲಿ ಮೀಸಲಾತಿ ನೀಡುವಾಗ ಪರಿಶಿಷ್ಟ ಸಮುದಾಯದ ನೌಕರರ ಪ್ರಾತಿನಿಧ್ಯದ ಕೊರತೆ ಮತ್ತು ಕಾರ್ಯದಕ್ಷತೆ ಗಣನೆಗೆ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ 2006ರಲ್ಲಿಯೇ ಸೂಚಿಸಿತ್ತು.
ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಕೆ. ರತ್ನಪ್ರಭಾ ಅವರು ಈ ಮೂರೂ ಅಂಶಗಳ ಕುರಿತ ಅಧ್ಯಯನ ನಡೆಸಿ, ಬಡ್ತಿಯಲ್ಲಿ ಮೀಸಲಾತಿ ನೀಡಿರುವುದನ್ನು ಸಮರ್ಥಿಸಿ ವರದಿ ಸಲ್ಲಿಸಿದ್ದರು. ಬಡ್ತಿಯಲ್ಲಿ ಮೀಸಲಾತಿಯನ್ನು ವಿಸ್ತರಿಸುವುದರಿಂದ ಆಡಳಿತದಲ್ಲಿನ ಸಮಗ್ರ ದಕ್ಷತೆಗೆ ಅಡ್ಡಿ ಆಗುವುದಿಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದರು. ಬಳಿಕ ರಾಜ್ಯ ಸರ್ಕಾರ, ಕಾನೂನು ತಜ್ಞರು ಮತ್ತು ರಾಜ್ಯ ಕಾನೂನು ಆಯೋಗದ ಅಭಿಪ್ರಾಯ ಪಡೆದು ಮಸೂದೆ ಸಿದ್ಧಪಡಿಸಿತ್ತು. ಅದಕ್ಕೆ, ರಾಷ್ಟ್ರಪತಿ ಒಪ್ಪಿಗೆ ಪಡೆದು, ಕಾಯ್ದೆ ರಚಿಸಲಾಗಿದೆ.
*
ಬಡ್ತಿ ಮೀಸಲಾತಿ ಸಂಬಂಧ ಕೋರ್ಟ್ ಆದೇಶದ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಅಡ್ವೊಕೇಟ್ ಜನರಲ್ ಜೊತೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ.
-ಎಚ್. ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.