ADVERTISEMENT

ವಿಶ್ವಾಸ ಇಲ್ಲದ ಮೇಲೆ ವಿಚಾರಣೆಗೆ ಹಾಜರಾಗಿದ್ದು ಏಕೆ?: ವರ್ಮಾಗೆ ‘ಸುಪ್ರೀಂ’ ತರಾಟೆ

ಪಿಟಿಐ
Published 30 ಜುಲೈ 2025, 15:55 IST
Last Updated 30 ಜುಲೈ 2025, 15:55 IST
   

ನವದೆಹಲಿ: ಮನೆಯಲ್ಲಿ ನಗದು ಪತ್ತೆಯಾದ ಪ್ರಕರಣದಲ್ಲಿ ತಮ್ಮನ್ನು ಅಪರಾಧಿಯಾಗಿಸಿ ಸುಪ್ರೀಂ ಕೋರ್ಟ್‌ನ ಆಂತರಿಕ ತನಿಖಾ ಸಮಿತಿಯು ನೀಡಿದ ವರದಿಯನ್ನು ಅಮಾನ್ಯ ಮಾಡಬೇಕು ಎಂದು ಕೋರಿದ್ದ ನ್ಯಾಯಮೂರ್ತಿ ಯಶವಂತ ವರ್ಮಾ ಅವರನ್ನು ಸುಪ್ರೀಂ ಕೋರ್ಟ್‌ ಬುಧವಾರ ಮತ್ತೆ ತರಾಟೆಗೆ ತೆಗೆದುಕೊಂಡಿತು.

ನಿಮ್ಮ ಬಗ್ಗೆ ನಿಮಗೇ ವಿಶ್ವಾಸ ಇಲ್ಲದ ಮೇಲೆ ಆಂತರಿಕ ತನಿಖಾ ಸಮಿತಿ ಎದುರು ಹಾಜರಾಗಿದ್ದು ಏಕೆ? ಆಗಲೇ ಏಕೆ ಅದನ್ನು ಪ್ರಶ್ನಿಸಲಿಲ್ಲ ಎಂದು ವರ್ಮಾ ಅವರನ್ನು ಸುಪ್ರೀಂ ಕೋರ್ಟ್ ಮತ್ತೆ ಪ್ರಶ್ನಿಸಿತು.

ಆಂತರಿಕ ತನಿಖಾ ಸಮಿತಿಯ ವಿರುದ್ಧ ಇದಕ್ಕೂ ಮುಂಚೆಯೇ ಸುಪ್ರೀಂ ಕೋರ್ಟ್‌ ಬಳಿ ಬರಬೇಕಿತ್ತು ಎಂದು ನ್ಯಾಯಾಲಯವು ಹೇಳಿತು.

ADVERTISEMENT

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಎ.ಜಿ.ಮಸೀಹ್‌ ಅವರ ನೇತೃತ್ವದ ನ್ಯಾಯಪೀಠವು, ನ್ಯಾಯಮೂರ್ತಿಯಿಂದ ದುರ್ನಡತೆ ನಡೆದಿದೆ ಎಂದು ಸಾಬೀತು ಮಾಡುವ ಪುರಾವೆಗಳು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರ ಬಳಿ ಇದ್ದರೆ, ಅವರು ಆ ಬಗ್ಗೆ ರಾಷ್ಟ್ರಪತಿಗಳು ಮತ್ತು ಪ್ರಧಾನಿಮಂತ್ರಿ ಅವರಿಗೆ ತಿಳಿಸಬಹುದು ಎಂದಿತು.

ವರ್ಮಾ ಅವರ ಅಶಿಸ್ತಿನ ವರ್ತನೆ ಮತ್ತು ಅವರ ವಿರುದ್ಧದ ಆರೋಪಗಳ ಕುರಿತ ಸಾಕ್ಷ್ಯಗಳ ಪರಿಶೀಲನೆ ಬಳಿಕ ಅವರ ಪದಚ್ಯುತಿ ಪ್ರಕ್ರಿಯೆ ಆರಂಭಕ್ಕೆ ಸಂಸತ್ತಿಗೆ ಸಿಜೆಐ ಶಿಫಾರಸು ಮಾಡಬಹುದು. ಶಿಫಾರಸನ್ನು ಸ್ವೀಕರಿಸುವ ಅಥವಾ ನಿರಾಕರಿಸುವ ಅಧಿಕಾರ ಸಂಸತ್ತಿಗೆ ಇರುತ್ತದೆ ಎಂದು ನ್ಯಾಯಪೀಠ ತಿಳಿಸಿತು.

‘ಶಿಫಾರಸಿನ ಅನ್ವಯ ಕ್ರಮ ಕೈಗೊಳ್ಳಬೇಕೇ ಅಥವಾ ಬೇಡವೇ ಎಂಬುದು ರಾಜಕೀಯ ನಿರ್ಧಾರ. ಆದರೆ ಎಲ್ಲಾ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ ಎಂಬ ಸಂದೇಶವನ್ನು ನ್ಯಾಯಾಂಗವು ಸಮಾಜಕ್ಕೆ ರವಾನಿಸಬೇಕಿದೆ’ ಎಂದು ನ್ಯಾಯಪೀಠ ಪ್ರತಿಪಾದಿಸಿತು.

ವರ್ಮಾ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು, ‘ವರ್ಮಾ ಅವರ ಪದಚ್ಯುತಿಗೆ ಸಲಹೆ ನೀಡಿದ ಆಂತರಿಕ ತನಿಖಾ ಸಮಿತಿಯ ಶಿಫಾರಸು ಅಸಾಂವಿಧಾನಿಕ. ಈ ರೀತಿಯ ಶಿಫಾರಸು ಅಪಾಯಕಾರಿ ನಿದರ್ಶನವಾಗಲಿದೆ’ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದರು.

ವರ್ಮಾ ವಿರುದ್ಧ ವಿಡಿಯೊ ಬಿಡುಗಡೆಯಾಗಿ, ಅವರ ಗೌರವಕ್ಕೆ ಅದಾಗಲೇ ಚ್ಯುತಿ ಬಂದಿದ್ದ ಕಾರಣ ಅವರು ಮುಂಚೆಯೇ ಸುಪ್ರೀಂ ಕೋರ್ಟ್‌ ಮೊರೆಹೋಗಿರಲಿಲ್ಲ ಎಂದು ಸಿಬಲ್‌ ತಿಳಿಸಿದರು.

ಆಂತರಿಕ ತನಿಖಾ ಸಮಿತಿ ಶಿಫಾರಸು ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರು ‘ಸಂಸತ್ತಿನಲ್ಲಿ ವರ್ಮಾ ಅವರ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ನಡೆಸಬೇಕು’ ಎಂದು ನೀಡಿರುವ ಸಲಹೆ ಪ್ರಶ್ನಿಸಿ ವರ್ಮಾ ಅವರು ಸಲ್ಲಿಸಿರುವ ಅರ್ಜಿಯ ಕುರಿತ ಆದೇಶವನ್ನು ನ್ಯಾಯಾಲಯವು ಕಾಯ್ದಿರಿಸಿತು.

ವರ್ಮಾ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರಿ ಸಲ್ಲಿಕೆಯಾದ ಅರ್ಜಿಯ ಆದೇಶವನ್ನೂ ಕೋರ್ಟ್‌ ಕಾಯ್ದಿರಿಸಿತು.

‘ನಗದು ಪತ್ತೆಯಾಗಿದ್ದ ಕೊಠಡಿಯನ್ನು ವರ್ಮಾ ಹಾಗೂ ಅವರ ಕುಟುಂಬಸ್ಥರು ಗೋಪ್ಯವಾಗಿ ನಿರ್ವಹಿಸುತ್ತಿದ್ದರು ಎಂಬುದು ಸಾಬೀತಾಗಿದೆ. ಈ ಅಪರಾಧವು ಅವರ ಪದಚ್ಯುತಿಯನ್ನು ಪ್ರತಿಪಾದಿಸುವಷ್ಟು ಗಂಭೀರವಾದುದು’ ಎಂದು ಸಮಿತಿ ವರದಿಯಲ್ಲಿ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.