ADVERTISEMENT

ಮರಳಿ ಮಂತ್ರಿಯಾಗಬೇಕಾದರೆ ಅನುಮತಿ ಪಡೆಯಬೇಕು: ಸೆಂಥಿಲ್‌ ಬಾಲಾಜಿಗೆ ಸುಪ್ರೀಂ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 15:53 IST
Last Updated 6 ಅಕ್ಟೋಬರ್ 2025, 15:53 IST
<div class="paragraphs"><p>ಸೆಂಥಿಲ್‌ ಬಾಲಾಜಿ</p></div>

ಸೆಂಥಿಲ್‌ ಬಾಲಾಜಿ

   

ಪಿಟಿಐ ಚಿತ್ರ

ನವದೆಹಲಿ: ‘ನೀವು ಮಂತ್ರಿಯಾಗಲು ಬಯಸಿದರೆ, ನ್ಯಾಯಾಲಯಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿ. ಅದನ್ನು ನಾವು ಪರಿಶೀಲಿಸುತ್ತೇವೆ’...

ADVERTISEMENT

ತಮಿಳುನಾಡಿನ ಮಾಜಿ ಸಚಿವ ಹಾಗೂ ಡಿಎಂಕೆ ಪ್ರಮುಖ ನಾಯಕ ಸೆಂಥಿಲ್‌ ಬಾಲಾಜಿ ಅವರಿಗೆ ಸೋಮವಾರ ಸುಪ್ರೀಂಕೋರ್ಟ್‌ ಈ ರೀತಿ ಪ್ರತಿಕ್ರಿಯಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆ ಬಾಕಿ ಇರುವ ವೇಳೆ ಮಂತ್ರಿಯಾಗಲು ಅನುಮತಿ ಇಲ್ಲ ಎಂದು ನ್ಯಾಯಮೂರ್ತಿ ಎಸ್‌. ಒಕಾ ಅವರು ನಿವೃತ್ತಿಗೂ ಮುನ್ನ ಏಪ್ರಿಲ್‌ನಲ್ಲಿ ನೀಡಿದ್ದ ತೀರ್ಪಿನಲ್ಲಿ ಆದೇಶ ನೀಡಿರಲಿಲ್ಲ. ಈ ಕುರಿತು ಸ್ಪಷ್ಟನೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ಮೇಲೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಹಾಗೂ ಜಾಯ್‌ಮಾಲಾ ಬಾಗ್ಚಿ ನೇತೃತ್ವದ ನ್ಯಾಯಪೀಠವು ಈ ರೀತಿ ಸೂಚನೆ ನೀಡಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಬೇಕು ಹಾಗೂ ಸಾಕ್ಷಿಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.

‘ಉದ್ಯೋಗಕ್ಕೆ ಹಣ’ ಹಗರಣಕ್ಕೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಪಡೆದ ಕೆಲವೇ ದಿನಗಳಲ್ಲಿ ಬಾಲಾಜಿ ಅವರನ್ನು ಸಚಿವರನ್ನಾಗಿ ಪುನಃ ನೇಮಕ ಮಾಡಲಾಗಿತ್ತು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್‌, ‘ಹುದ್ದೆ ಮತ್ತು ಸ್ವಾತಂತ್ರ್ಯದ ನಡುವೆ ನಿಮ್ಮ ಆಯ್ಕೆ ಯಾವುದು ಎಂಬುದನ್ನು ತೀರ್ಮಾನಿಸಿ, ತಮಿಳುನಾಡಿನ ಸಚಿವ ಸ್ಥಾನದಿಂದ ಕೆಳಗಿಳಿಯದೆ ಇದ್ದರೆ ಜಾಮೀನು ರದ್ದು ಮಾಡುವುದಾಗಿ ಅದು ಬಾಲಾಜಿ ಅವರಿಗೆ ಎಚ್ಚರಿಕೆ ನೀಡಿತ್ತು. ಇದಾದ ನಾಲ್ಕು ದಿನಗಳಲ್ಲಿ ಬಾಲಾಜಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ತಮಿಳುನಾಡು ಸರ್ಕಾರಿ ಒಡೆತನದ ಚಿಲ್ಲರೆ ಮದ್ಯ ಮಾರಾಟ ನಿಗಮದಲ್ಲಿ (ಟಿಎಎಸ್ಎಂಎಸಿ) ₹1000 ಕೋಟಿ ಅಕ್ರಮ ನಡೆದಿದೆ ಎಂದು ಆಪಾದಿಸಿ ಜಾರಿ ನಿರ್ದೇಶನಾಲಯ(ಇಡಿ) ಪ್ರಕರಣ ದಾಖಲಿಸಿ ಸೆಂಥಿಲ್‌ ಬಾಲಾಜಿ ಅವರನ್ನು ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.