ADVERTISEMENT

ಬಿಬಿಸಿ ಸಾಕ್ಷ್ಯಚಿತ್ರ ತಡೆ ಪ್ರಶ್ನಿಸಿ ಅರ್ಜಿ: ಮುಂದಿನ ವಾರ ‘ಸುಪ್ರೀಂ’ ವಿಚಾರಣೆ

2002 ಗುಜರಾತ್ ಗಲಭೆ ಕುರಿತ ಸಾಕ್ಷ್ಯಚಿತ್ರಕ್ಕೆ ಕೇಂದ್ರದ ನಿರ್ಬಂಧ

ಪಿಟಿಐ
Published 30 ಜನವರಿ 2023, 12:52 IST
Last Updated 30 ಜನವರಿ 2023, 12:52 IST
.
.   

ನವದೆಹಲಿ: 2002ರ ಗುಜರಾತ್ ಗಲಭೆಗಳ ಕುರಿತ ಬಿಬಿಸಿ ‘ಇಂಡಿಯಾ: ದ ಮೋದಿ ಕ್ವಶ್ಚನ್’ ಸಾಕ್ಷ್ಯಚಿತ್ರಕ್ಕೆ ತಡೆಯೊಡ್ಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮುಂದಿನ ಸೋಮವಾರದಂದು (ಫೆ. 6) ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಜೆ.ಬಿ. ಪಾರ್ದೀವಾಲಾ ಅವರನ್ನೊಳಗೊಂಡ ನ್ಯಾಯಪೀಠಕ್ಕೆ, ಸೋಮವಾರ ಹಿರಿಯ ಪತ್ರಕರ್ತ ಎನ್. ರಾಮ್ ಹಾಗೂ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲ ಪ್ರಶಾಂತ್ ಭೂಷಣ್ ಅವರ ಪರವಾಗಿ ವಕೀಲರಾದ ಎಂ.ಎಲ್. ಶರ್ಮಾ ಹಾಗೂ ಸಿ.ಯು. ಸಿಂಗ್ ಅವರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ತುರ್ತಾಗಿ ವಿಚಾರಣೆಗೆ ಪಟ್ಟಿ ಮಾಡುವಂತೆ ಕೋರಿಕೆಯನ್ನು ಸಲ್ಲಿಸಿದರು.

ಇದನ್ನು ಗಮನಿಸಿದ ನ್ಯಾಯಪೀಠವು, ಮುಂದಿನ ಸೋಮವಾರ ಅಂದರೆ ಫೆ. 6ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಒಪ್ಪಿಗೆ ಸೂಚಿಸಿತು.

ADVERTISEMENT

ಎನ್. ರಾಮ್ ಮತ್ತು ಪ್ರಶಾಂತ್ ಭೂಷಣ್ ಅವರ ಪರವಾಗಿ ಪ್ರತ್ಯೇಕ ಅರ್ಜಿ ಸಲ್ಲಿಸಿರುವ ಹಿರಿಯ ವಕೀಲ ಸಿ.ಯು. ಸಿಂಗ್ ಅವರು, ‘ತುರ್ತು ಅಧಿಕಾರವನ್ನು ಬಳಸಿ ರಾಮ್ ಮತ್ತು ಭೂಷಣ್ ಅವರ ಟ್ವೀಟ್‌ಗಳನ್ನು ಅಳಿಸಿ ಹಾಕಲಾಗಿದೆ. ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ ಅಜ್ಮೀರ್‌ನ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯದಿಂದ ಹೊರಗಿಡಲಾಗಿದೆ’ ಎಂದು ಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಅವರು ‘ಈ ಬಗ್ಗೆ ವಿಚಾರಣೆ’ ನಡೆಸುವುದಾಗಿ ತಿಳಿಸಿದರು. ‌

‘ಸಾಕ್ಷ್ಯಚಿತ್ರಕ್ಕೆ ತಡೆಯೊಡ್ಡಿರುವ ಕೇಂದ್ರ ಸರ್ಕಾರದ ನಿರ್ಧಾರವು ಅನಿಯಂತ್ರಿತ ಹಾಗೂ ಅಸಾಂವಿಧಾನಿಕ ಕ್ರಮವಾಗಿದೆ’ ಎಂದು ಆರೋಪಿಸಿದ ವಕೀಲ ಶರ್ಮಾ ಅವರು, ‘ಸಾಕ್ಷ್ಯಚಿತ್ರ ಪ್ರದರ್ಶಿಸಿದವರನ್ನು ಬಂಧಿಸಲಾಗುತ್ತಿದೆ. ದಯವಿಟ್ಟು ತುರ್ತಾಗಿ ವಿಚಾರಣೆ ನಡೆಸಬೇಕು’ ಎಂದು ಮನವಿ ಮಾಡಿದರು.

ಬಿಬಿಸಿಯ ಸಾಕ್ಷ್ಯಚಿತ್ರದ ಭಾಗ–1 ಮತ್ತು ಭಾಗ–2 ಎರಡನ್ನೂ ಪರಿಶೀಲಿಸಿ, 2002ರ ಗುಜರಾತ್ ಗಲಭೆಯಲ್ಲಿ ನೇರ ಹಾಗೂ ಪರೋಕ್ಷವಾಗಿ ಭಾಗಿಯಾದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಪಿಐಎಲ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಲಾಗಿದೆ.

ತಾವು ಸಲ್ಲಿಸಿರುವ ಪಿಐಎಲ್‌ನಲ್ಲಿ ಶರ್ಮಾ ಅವರು, ಸಾಂವಿಧಾನಿಕ ಪ್ರಶ್ನೆಯನ್ನು ಎತ್ತಿದ್ದು, ‘2002ರ ಗುಜರಾತ್ ಗಲಭೆಯ ಸುದ್ದಿಗಳು, ಸತ್ಯಗಳು ಮತ್ತು ವರದಿಗಳನ್ನು ನೋಡಲು ಆರ್ಟಿಕಲ್ 19 (1) (2)ರ ಅಡಿಯಲ್ಲಿ ನಾಗರಿಕರಿಗೆ ಹಕ್ಕಿದೆಯೇ ಇಲ್ಲವೇ ಎಂಬುದನ್ನು ಎಂದು ಸುಪ್ರೀಂ ಕೋರ್ಟ್ ನಿರ್ಧರಿಸಬೇಕು’ ಎಂದು ಹೇಳಿದ್ದಾರೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ 2023ರ ಜನವರಿ 21ರ ಆದೇಶವನ್ನು ಕಾನೂನುಬಾಹಿರ, ದುರುದ್ದೇಶಪೂರಿತ, ಅನಿಯಂತ್ರಿತ ಮತ್ತು ಅಸಂವಿಧಾನಿಕ ಎಂದು ಉಲ್ಲೇಖಿಸಿ ಅದನ್ನು ರದ್ದುಗೊಳಿಸಲು ನಿರ್ದೇಶನ ನೀಡಬೇಕೆಂದೂ ಅವರು ಕೋರಿದ್ದಾರೆ.

ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ‘ದಾಖಲಿತ ಸತ್ಯಾಂಶ’ಗಳು ಇವೆ. ಇವು ‘ಪುರಾವೆ’ಗಳು ಹೌದು. ಸಂತ್ರಸ್ತರಿಗೆ ನ್ಯಾಯ ದೊರೆಕಿಸಿಕೊಡಲು ಇವುಗಳನ್ನು ಬಳಸಿಕೊಳ್ಳಬಹುದು ಎಂದೂ ಮನವಿಯಲ್ಲಿ ಪ್ರತಿಪಾದಿಸಲಾಗಿದೆ. ‌

ಕೇಂದ್ರ ಸರ್ಕಾರವು ಜ. 21ರಂದು ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ಹಂಚಿಕೊಳ್ಳುವ ಯೂಟ್ಯೂಬ್ ವಿಡಿಯೊಗಳು ಮತ್ತು ಟ್ವಿಟ್ಟರ್‌ ಪೋಸ್ಟ್‌ಗಳಿಗೆ ತಡೆಯೊಡ್ಡುವಂತೆ ನಿರ್ದೇಶನ ನೀಡಿದೆ.

****

ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥ: ಕಿರಣ್ ರಿಜಿಜು ಟ್ವೀಟ್

ನವದೆಹಲಿ: ಬಿಬಿಸಿ ಸಾಕ್ಷ್ಯಚಿತ್ರವನ್ನು ತಡೆಹಿಡಿಯುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿರುವ ಅರ್ಜಿದಾರರ ವಿರುದ್ಧ ಕೇಂದ್ರ ಸೋಮವಾರ ವಾಗ್ದಾಳಿ ನಡೆಸಿರುವ ಕಾನೂನು ಸಚಿವ ಕಿರಣ್ ರಿಜಿಜು ಅವರು, ‘ಸುಪ್ರೀಂ ಕೋರ್ಟ್‌ನ ಅಮೂಲ್ಯವಾದ ಸಮಯವನ್ನು ಅವರು (ಅರ್ಜಿದಾರರು) ರೀತಿ ವ್ಯರ್ಥ ಮಾಡುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.

‘ಸಾವಿರಾರು ಸಾಮಾನ್ಯ ಜನರು ನ್ಯಾಯಾಲಯದ ದಿನಾಂಕಕ್ಕಾಗಿ ಕಾಯುತ್ತಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.